ಬೇರೆ ರಾಜ್ಯಗಳಿಂದ ಜಿಲ್ಲೆಗೆ ಇದುವರೆಗೆ ಆಗಮಿಸಿರುವ 1428ಮಂದಿಯನ್ನು ಸಾಂಸ್ಥಿಕ ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದ ಆಗಮಿಸಿದ್ದವರ ಪೈಕಿ 802 ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು, 14ಪಾಸಿಟಿವ್ ಬಂದಿವೆ. ಇನ್ನುಳಿದವರ ಪರೀಕ್ಷೆಯನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಇದುವರೆಗೆ ಒಟ್ಟು 4554 ಸ್ಯಾಂಪಲ್ಗಳ ಪರೀಕ್ಷೆ ನಡೆಸಲಾಗಿದ್ದು, 4349 ವರದಿ ಬಂದಿವೆ. ಇನ್ನೂ 191 ಸ್ಯಾಂಪಲ್ಗಳ ವರದಿ ಬರಬೇಕಿದೆ ಎಂದು ಹೇಳಿದರು.
ಕ್ವಾರೆಂಟೈನ್ ವ್ಯವಸ್ಥೆ: ಪ್ರಸ್ತುತ 916ಮಂದಿ ಸಾಂಸ್ಥಿಕ ಕ್ವಾರೆಂಟೈನ್ ಮತ್ತು 64ಮಂದಿ ಹೋಂ ಕ್ವಾರೆಂಟೈನ್ನಲ್ಲಿದ್ದಾರೆ ಎಂದು ಹೇಳಿದರು. ಕ್ವಾರೆಂಟೈನ್ ವ್ಯವಸ್ಥೆಗಾಗಿ 50 ವಸತಿ ಶಾಲೆಗಳು, ಹೊಟೇಲ್ಗಳು ಮತ್ತು ಗ್ರಾಮೀಣ ಭಾಗದಲ್ಲಿ 7ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಸಿಟಿವ್ ಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ 67ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 150ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಕ್ವಾರೆಂಟೈನ್ ಮಾಡಲಾಗಿದೆ. ಕ್ವಾರೆಂಟೈನ್ನಲ್ಲಿರುವವರಿಗೆ ಪ್ರತಿದಿನ ಇಡ್ಲಿ, ಬಾಳೆ ಹಣ್ಣು, ಅನ್ನ ಸಾಂಬಾರು, ಪಲ್ಯ, ಚಪಾತಿ, ಮೊಟ್ಟೆ ಸೇರಿದಂತೆ ಉತ್ತಮವಾದ ಆಹಾರವನ್ನು ಒದಗಿಸಲಾಗುತ್ತಿದೆ. ಕ್ವಾರೆಂಟೈನ್ನಲ್ಲಿರುವವರು ತಮ್ಮ ಅಹವಾಲುಗಳನ್ನು ಸಲ್ಲಿಸಲು 24×7 ಕಂಟ್ರೋಲ್ ರೂಂ ತೆರೆಯಲಾಗಿದ್ದು, 08182-220082 ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದು ಅವರು ಹೇಳಿದರು.
5.12 ಲಕ್ಷ ಜನರ ಆರೋಗ್ಯದ ಮೇಲೆ ನಿಗಾ: ಜಿಲ್ಲೆಯಲ್ಲಿ ಎರಡನೇ ಹಂತದ ಮನೆ ಮನೆ ಆರೋಗ್ಯ ಸಮೀಕ್ಷೆ ಪೂರ್ಣಗೊಂಡಿದ್ದು, 3.26ಜನರ ಆರೋಗ್ಯದ ಮಾಹಿತಿ ಪಡೆಯಲಾಗಿದೆ. ಇದೀಗ ಮೂರನೇ ಹಂತದ ಸಮೀಕ್ಷೆ ಆರಂಭಿಸಲಾಗಿದ್ದು, ಒಟ್ಟು 5.12ಲಕ್ಷ ಜನರ ಆರೋಗ್ಯ ಮಾಹಿತಿ ಪಡೆಯಲಾಗುವುದು. ಇದರಲ್ಲಿ 18ಸಾವಿರ ಮಂದಿ ಗರ್ಭಿಣಿಯರು, 83ಸಾವಿರ ಮಂದಿ ಡಯಾಬಿಟಿಸ್ ವ್ಯಕ್ತಿಗಳು, 60ವರ್ಷ ಮೇಲ್ಪಟ್ಟವರು ಸೇರಿದ್ದಾರೆ. ಆಶಾ ಕಾರ್ಯಕರ್ತೆಯರು ಮತ್ತು ಬಿಎಲ್ಒಗಳು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ ಎಂದರು.
5200ಮಂದಿಗೆ ಪಾಸ್: ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ತೆರಳಲು ಇದುವರೆಗೆ 5200 ಮಂದಿಗೆ ಪಾಸ್ ನೀಡಲಾಗಿದೆ. ಇದರಲ್ಲಿ 281 ಉತ್ತರ ಪ್ರದೇಶ, 79ಮಂದಿ ಜಾರ್ಖಂಡ್, 316 ಮಂದಿ ಬಿಹಾರ, 150ಮಂದಿ ಪಶ್ಚಿಮ ಬಂಗಾಳ, 250ಮಂದಿ ರಾಜಸ್ತಾನ, 36ಮಂದಿ ಮಧ್ಯಪ್ರದೇಶದವರು ಸೇರಿದ್ದಾರೆ. ಇದೇ ವೇಳೆ ಬೇರೆ ಜಿಲ್ಲೆಗಳಿಂದ ಆರಂಭಿಕ ಹಂತದಲ್ಲಿ 59ಸಾವಿರ ಮಂದಿ ಬಳಿಕ 3300ಮಂದಿ ಪಾಸ್ ಬಳಸಿಕೊಂಡು ಬಂದಿದ್ದಾರೆ. ಸುಮಾರು 150ಮಂದಿ ಪಾಸ್ ಇಲ್ಲದೇ ಜಿಲ್ಲೆಗೆ ಬರುವ ಪ್ರಯತ್ನ ಮಾಡಿದ್ದು, ಅಂತವರನ್ನು ಚೆಕ್ಪೋಸ್ಟ್ಗಳಲ್ಲಿ ಪತ್ತೆ ಹಚ್ಚಿ ಕ್ವಾರೆಂಟೈನ್ಗೆ ಕ್ರಮ ಕೈಗೊಳ್ಳಲಾಗಿದೆ. ಕಳ್ಳಹಾದಿಯಲ್ಲಿ ಬಂದವರನ್ನು ಸಾರ್ವಜನಿಕರ ಸಹಕಾರದೊಂದಿಗೆ ಪತ್ತೆ ಹಚ್ಚಲು ಸಾಧ್ಯವಾಗಿದೆ. ಅಂತಹ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು 08182-221010 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದರು.
ಸ್ಪಷ್ಟನೆ: ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ನಲ್ಲಿದ್ದ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಮೆಗ್ಗಾನ್ನಲ್ಲಿರುವ ಕೋವಿಡ್ ಆಸ್ಪತ್ರೆಗೆ ಸಂಬಂಧಿಸಿದಂತೆ ಕ್ವಾರೆಂಟೈನ್ನಲ್ಲಿದ್ದ ಯಾರೂ ಕೂಡಾ ತಪ್ಪಿಸಿಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದರು.