ಶಿವಮೊಗ್ಗ, ಫೆಬ್ರವರಿ 01 : ಶಿವಮೊಗ್ಗದ ಶನೈಶ್ಚರ ದೇವಸ್ಥಾನ ಸಮಿತಿಯು ಶಿವಮೊಗ್ಗ ನಗರದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿರುವ ಶೇ.60ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.5,000/- ಹಾಗೂ ಶೇ.75ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ 6,000/-ರೂ.ಗಳ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್, ಯುವಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಿತಿಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ನಗರದ ಬೆಕ್ಕಿನ ಕಲ್ಮಠದ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ ಸಲುವಾಗಿ ಏರ್ಪಡಿಸಲಾಗಿದ್ದ ಪರೀಕ್ಷಾ ಸ್ಫೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಸ್.ಎಸ್.ಎಲ್.ಸಿ.ಯು ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟವಾಗಿದ್ದು, ಇಲ್ಲಿಂದ ವಿದ್ಯಾರ್ಥಿಗಳ ಭವಿಷ್ಯದ ಬದುಕು ಬದಲಾವಣೆಯ ಹಂತ ತಲುಪಲಿದೆ. ಈ ಹಂತದಲ್ಲಿ ಯಶಸ್ಸು ಕಂಡ ವಿದ್ಯಾರ್ಥಿಗಳು ದೇಶದ ಆಸ್ತಿಗಳಾಗಿ ಮಾರ್ಪಾಟಾಗಲಿದ್ದಾರೆ ಎಂದವರು ನುಡಿದರು.
ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಉತ್ತಮ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಹಕಾರಿಯಾಗಲಿದೆ. ಇದು ಶಿಕ್ಷಕರು, ಪೋಷಕರು ಮತ್ತು ಸಮಾಜಕ್ಕೂ ಹರ್ಷದ ಸಂಗತಿಯಾಗಲಿದೆ ಎಂದ ಅವರು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಲಿಚ್ಚಿಸುವ ವಿದ್ಯಾರ್ಥಿಗಳು ಬೇಗ ಎದ್ದು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕೆಂದವರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎನ್.ರಮೇಶ್ ಅವರು ಮಾತನಾಡಿ, ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಟಿ.ವಿ., ಮೊಬೈಲ್ಗಳಿಂದ ದೂರವಿರುವಂತೆ ಹಾಗೂ ಪ್ರತಿ ವಿಷಯಗಳಿಗೆ ಸಮಯ ಮೀಸಲಿರಿಸಿ ಅಧ್ಯಯನ ಮಾಡಿದ್ದಲ್ಲಿ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಲಿದೆ ಎಂದವರು ನುಡಿದರು.
ಪ್ರೇರಣೆ ಕಲಿಕೆಗೆ ಹೆದ್ದಾರಿ. ಮಕ್ಕಳು ಮತ್ತು ಶಿಕ್ಷಕರಿಗೆ ಪ್ರೋತ್ಸಾಹ ಅಗತ್ಯವಿದೆ. ಮಕ್ಕಳನ್ನು ಪ್ರೋತ್ಸಾಹಿಸುವ ಸಮಿತಿಯ ನಿರ್ಣಯ ಪ್ರಶಂಸನೀಯವಾದುದು. ವಿದ್ಯಾರ್ಥಿಗಳು ಓದಿನ ಮಹತ್ವವನ್ನು ಅರಿತು ಮುಂದುವರೆಯುವಂತೆ ಸೂಚಿಸಿದ ಅವರು, ವಿದ್ಯಾರ್ಥಿಗಳು ತಮಗೆ ಕಠಿಣ ಎನಿಸುವ ವಿಷಯಗಳನ್ನು ಬೇಗನೆ ಎದ್ದು ಅಧ್ಯಯನ ಮಾಡಬೇಕು. ಓದುವ ಸ್ಥಳ ಪ್ರಶಾಂತವಾಗಿದ್ದು, ಶುದ್ಧ ಗಾಳಿ ಮತ್ತು ಬೆಳಕು ಇರುವಂತಿರಬೇಕು. ಓದಿದ ನಂತರ ಟಿಪ್ಪಣಿ ಮಾಡಿಟ್ಟುಕೊಳ್ಳುವುದು ಸೂಕ್ತವಾದುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಡಾ|| ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು. ಸಚಿವ ವಿಶೇಷಾಧಿಕಾರಿ ಲೋಕೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್, ಚೋಪ್ದಾರ್, ಕಾರ್ಯಕ್ರಮ ಆಯೋಜಕ ಸ.ನಾ.ಮೂರ್ತಿ, ಎಸ್.ಆರ್.ಸೋಮು ಮತ್ತಿತರರು ಉಪಸ್ಥಿತರಿದ್ದರು. ದಾವಣಗೆರೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ನಾಗರಾಜ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದರು. ನಗರದ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
