2024ರ ವೇಳೆಗೆ ಭಾರತ ದೇಶದ ಗ್ರಾಮ ಗ್ರಾಮಗಳಲ್ಲಿಯೂ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಸುರಕ್ಷಿತ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ಜಲ ಜೀವನ ಮಿಷನ್ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಮಹತ್ತರ ಯೋಜನೆಯು ಉತ್ತಮ ಪ್ರಗತಿಯಲ್ಲಿದೆ.
ಗ್ರಾಮೀಣ ಭಾಗಗಳಲ್ಲಿ ಬಹುದೊಡ್ಡ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆಯು ಕೂಡ ಒಂದು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪಡೆಯುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಇಂತಹ ಸಮಸ್ಯೆ ಬಗೆಹರಿಸುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ಜಲಶಕ್ತಿ ಸಚಿವಾಲಯದ ಮೂಲಕ ವಿಶೇಷ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ.
ಪ್ರತಿಯೊಂದು ಗ್ರಾಮೀಣ ಮನೆಗೂ ನಲ್ಲಿಯ ಮುಖಾಂತರ ನೀರಿನ ಸಂಪರ್ಕ ಒದಗಿಸುವ ಗುರಿಯೊಂದಿಗೆ ದೇಶಾದ್ಯಂತ 2019ರಲ್ಲಿ “ಜಲ ಜೀವನ ಮಿಷನ್ ಯೋಜನೆ”ಯು ಆರಂಭಗೊಂಡಿತು. ಹರಮಘಟ್ಟ ಗ್ರಾಮ ಪಂಚಾಯಿತಿಯ ಸೋಮಿನಕೊಪ್ಪ ಹಾಗೂ ಸುತ್ತುಕೋಟೆಯಲ್ಲಿ ಯೋಜನೆ ಪೂರ್ಣಗೊಂಡು ಜಲಜೀವನ್ ಮಿಷನ್ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಮನೆಗಳಿಗೂ ನೀರಿನ ಸಂಪರ್ಕ ಕಲ್ಪಿಸಲಾಗಿದೆ.
ಗ್ರಾಮದ ಪ್ರತಿ ಮನೆಗಳಿಗೂ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಒದಗಿಸಲು ಜಾರಿಗೆ ತಂದ ಯೋಜನೆಯು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿಯೂ ಅನುಷ್ಠಾನಗೊಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮ ಪ್ರಮಾಣದ ಅನುದಾನ ಸೇರಿ ಒಟ್ಟು ಶೇ. 85 ಅನುದಾನ ಸಿಗುತ್ತದೆ. ಸ್ಥಳೀಯವಾಗಿ ಇನ್ನುಳಿದ ಅನುದಾನ ಬಳಸಲಾಗುತ್ತದೆ.
ಹರಮಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತುಕೋಟೆಯಲ್ಲಿ 160ಕ್ಕೂ ಅಧಿಕ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆ ತಲುಪಿದೆ. ಹರಮಘಟ್ಟದ ಸೋಮಿನಕೊಪ್ಪದಲ್ಲಿ 350ಕ್ಕೂ ಅಧಿಕ ಗ್ರಾಮೀಣ ಮನೆಗಳಿಗೆ ಯೋಜನೆಯ ಪ್ರಯೋಜನ ದೊರೆಯುತ್ತಿದೆ. ಹರಮಘಟ್ಟ ಗ್ರಾಮದಲ್ಲಿ 400ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದು, ಇನ್ನುಳಿದ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಿದ ನಂತರ ಯೋಜನೆ ಅನುಷ್ಠಾನಗೊಳಿಸಬೇಕಿದೆ. | ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರಮಘಟ್ಟ.