ಶಿವಮೊಗ್ಗ, ಜೂ.20 : ವಿಧಾನ ಪರಿಷತ್ ಸದಸ್ಯರ ಹಕ್ಕುಗಳಿಗೆ ಚ್ಯುತಿ ಉಂಟಾದ ಪ್ರಕರಣಗಳಲ್ಲಿ ತಪ್ಪು ಮಾಡಿದವರಿಗೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷ ಆಯನೂರು ಮಂಜುನಾಥ ಅವರು ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರಿಗೆ ಅಧಿಕಾರಿಗಳು ನಿಯಮಾನುಸಾರ ಸರಿಯಾದ ಸ್ಥಾನಮಾನ ನೀಡದಿರುವ ಬಗ್ಗೆ ಹಲವಾರು ದೂರುಗಳು ಸಮಿತಿಗೆ ಬರುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಅಂತಹ 13ದೂರುಗಳಿವೆ. ಈ ಕುರಿತು ಅಧಿಕಾರಿಗಳಿಗೆ ನಿಯಮಾವಳಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಲಾಗುತ್ತಿದೆ ಎಂದು ಹೇಳಿದರು.
ವಿಧಾನ ಸಭೆ ಸದಸ್ಯರು ಹಾಗೂ ಲೋಕಸಭಾ ಸದಸ್ಯರಿಗೆ ನೀಡುವಷ್ಟೇ ಸ್ಥಾನಮಾನವನ್ನು ವಿಧಾನ ಪರಿಷತ್ ಸದಸ್ಯರಿಗೂ ನಿಯಮಾವಳಿ ಪ್ರಕಾರ ನೀಡಬೇಕು. ಸಭೆ ಸಮಾರಂಭಗಳ ಶಿಷ್ಟಾಚಾರ ಮಾತ್ರವಲ್ಲದೆ, ಆಡಳಿತಾತ್ಮಕ ವಿಷಯಗಳ ಮಾಹಿತಿಯನ್ನು ಸಹ ವಿಧಾನ ಪರಿಷತ್ ಸದಸ್ಯರಿಗೆ ತಕ್ಷಣ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಮುಖ್ಯವಾಗಿ ಸಣ್ಣ ನೀರಾವರಿ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ಪಂಚಾಯತ್ ರಾಜ್, ಮೆಸ್ಕಾಂ, ಶಿಕ್ಷಣ ಇಲಾಖೆಯ ಹಕ್ಕುಚ್ಯುತಿ ಪ್ರಕರಣಗಳು ಇವೆ. ಈ ಪ್ರಕರಣಗಳ ಕುರಿತಾಗಿ ಶಿಸ್ತುಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಆದಷ್ಟು ಬೇಗನೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಹಕ್ಕುಚ್ಯುತಿ ಪ್ರಕರಣಗಳ ಬಗ್ಗೆ ಪರಿಶೀಲನಾ ಸಭೆ ನಡೆಸಬೇಕು. ಆಗಿಂದಾಗ್ಗೆ ಅಧಿಕಾರಿಗಳಿಗೆ ಈ ಕುರಿತು ಕಾರ್ಯಾಗಾರ ಆಯೋಜಿಸಲು ಸೂಚಿಸಲಾಗಿದೆ ಎಂದರು.
ಯಾವುದೇ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತಾರದೆ ಮಾಡುವಂತಿಲ್ಲ. ಯಾವುದೇ ಸಮಾರಂಭಗಳನ್ನು ಆಯೋಜಿಸುವ ಪೂರ್ವದಲ್ಲಿ ಕನಿಷ್ಟ 7ದಿನಗಳ ಮೊದಲೇ ಸದಸ್ಯರ ಗಮನಕ್ಕೆ ತರಬೇಕು. ಗುತ್ತಿಗೆದಾರರು ಯಾವುದೇ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಆಯೋಜಿಸುವಂತಿಲ್ಲ. ಆಯಾ ಇಲಾಖಾ ಮುಖ್ಯಸ್ಥರೇ ಅದಕ್ಕೆ ಹೊಣೆಗಾರರು. ಈ ರೀತಿ ಎಲ್ಲಾ ಜಿಲ್ಲೆಗಳಿಗೆ ಸಮಿತಿ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸಭಾಪತಿ ಅವರಿಗೆ ವರದಿಯನ್ನು ಸಲ್ಲಿಸಲಿದೆ.
ಸಮಿತಿ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಅರವಿಂದ ಅರಳಿ, ಎ.ದೇವೇಗೌಡ, ನಿರಾಣಿ ಹನುಮಂತಪ್ಪ ರುದ್ರಪ್ಪ, ವಿಜಯಸಿಂಗ್ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಪ್ರಸನ್ನ ಕುಮಾರ್ ಅವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

error: Content is protected !!