ಶಿವಮೊಗ್ಗ, ಡಿಸೆಂಬರ್-10 : ಮಾನವ ಹುಟ್ಟಿನಿಂದಲೇ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಪಡೆದುಕೊಳ್ಳುತ್ತಾನೆ. ಹಕ್ಕುಗಳನ್ನು ಅನುಭವಿಸುವಂತೆಯೇ ಕರ್ತವ್ಯಗಳನ್ನು ಪಾಲಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಕೆ.ಎನ್.ಸರಸ್ವತಿ ಹೇಳಿದರು.
ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದೇಶೀಯ ವಿದ್ಯಾಶಾಲಾ ಸಮಿತಿ, ಡಿ.ವಿ.ಎಸ್. ಕಲಾ,ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಹಾಗೂ ಸಂಜೆ ಕಾಲೇಜು, ಮಹಾತ್ಮಾಗಾಂಧಿ ಗ್ರಾಮಿಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್, ಜಿಲ್ಲಾ ನ್ಯಾಯವಾದಿಗಳ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ “ಸಂವಿಧಾನ ದಿನಾಚರಣೆ ಅಂಗವಾಗಿ ನಗರದ ಡಿ.ವಿ.ಎಸ್. ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮೂಲಭೂತ ಕರ್ತವ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಮಾನವ ಹಕ್ಕುಗಳ ದಿನಾಚರಣೆ”ಯನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಹಕ್ಕುಗಳ ರಕ್ಷಣೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ. ಅವುಗಳ ಉಲ್ಲಂಘನೆಯಾದಾಗ ಕಾನೂನು ನೆರವು ಪಡೆಯಲು ಅವಕಾಶವಿದೆ. ಮಾನವ ತನ್ನ ಇಷ್ಟದಂತೆ ಜೀವಿಸುವ, ಅಭಿಪ್ರಾಯ ವ್ಯಕ್ತಪಡಿಸುವ, ಧರ್ಮ ಅನುಸರಿಸುವ, ಸಮಾನತೆ ಸೇರಿದಂತೆ ಇತರೆ ಹಕ್ಕುಗಳ ಉಲ್ಲಂಘನೆಯಾದಾಗ ಅಗತ್ಯ ಕಾನೂನು ನೆರವು ಪಡೆಯಬಹುದಾಗಿದೆ ಎಂದವರು ನುಡಿದರು.
ಎಲ್ಲರಲ್ಲೂ ಮೂಲಭೂತ ಹಕ್ಕುಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದು, ಅವುಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳಲ್ಲದೇ ಕರ್ತವ್ಯಗಳ ಪಾಲನೆ ಬಗ್ಗೆಯೂ ಗಮನಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ಬಸಪ್ಪಗೌಡರು ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿಯೆ ಭಾರತದ ಸಂವಿಧಾನದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು ಎಂದರು.
ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಮಹತ್ವ, ರಕ್ಷಣೆ ಕುರಿತು ಜನರಲ್ಲಿ ಇನ್ನೂ ಹೆಚ್ಚಿನ ತಿಳುವಳಿಕೆ ಮೂಡಬೇಕು. ಇದರಿಂದ ಹಕ್ಕುಗಳ ಉಲ್ಲಂಘನೆಯಾಗದಂತೆ ತಡೆಯಲು ಸಹಾಯಕವಾಗುತ್ತದೆ. ದೇಶದ ಕಾನೂನುಗಳ ರಕ್ಷಣೆ ಮತ್ತು ಅನುಸರಿಸುವಲ್ಲಿ ಯುವಜನತೆಯ ಪಾತ್ರ ಅತಿ ಮುಖ್ಯ ಎಂದರು.
ಮಾನವನಿಗೆ ಜೀವಿಸಲು ಯಾವ ಯಾವ ಹಕ್ಕು ಮತ್ತು ಕರ್ತವ್ಯಗಳು ಬೇಕು ಎಂಬುದನ್ನು ನಮ್ಮ ಸಂವಿಧಾನ ಅರ್ಥೈಸಿದ್ದು, ಮುಂದಿನ ದಿನಮಾನಗಳಲ್ಲಿ ಶಾಂತಿ ನೆಲೆಸುವುದರ ಜೊತೆ ಜೊತೆ ದೇಶದ ಭಯೋತ್ಪಾದನೆ ನಿರ್ಮೂಲನೆಯಾಗುವ ಉದ್ದೇಶದಿಂದ ಎಲ್ಲಾ ಸದಸ್ಯ ರಾಷ್ಟ್ರಗಳು ಡಿ.10 ರಂದು ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಡಿ.ಎಸ್. ಹಾಲಸಿದ್ದಪ್ಪ ಮಾತನಾಡಿದರು. ಮೂಲಭೂತ ಕರ್ತವ್ಯಗಳ ಕುರಿತ ಅಭಿಯಾನದ ನೋಡಲ್ ಅಧಿಕಾರಿ ಕೆ.ಸಿ.ಬಸವರಾಜಪ್ಪ ಉಪನ್ಯಾಸ ನೀಡಿದರು. ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್. ರಾಜಶೇಖರ್, ಡಿ.ವಿ.ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪ್ರಾಶುಪಾಲ ಡಾ.ಎಚ್.ಟಿ. ಕೃಷ್ಣಮೂರ್ತಿ, ಡಿ.ವಿ.ಎಸ್. ಸಂಜೆ ಕಾಲೇಜು ಪ್ರಾಂಶುಪಾಲ ಡಾ. ಎ.ಡಿ. ವೆಂಕಟೇಶ್, ಡಿ.ವಿ.ಎಸ್. ಕಾಲೇಜು ಐಕ್ಯೂಎಸಿ ಅಧಿಕಾರಿ ಡಾ.ಹೆಚ್.ವಿ, ಅನಿಲ್‍ಕುಮಾರ್, ಡಿ.ವಿ.ಎಸ್. ಕಾಲೇಜು ಎನ್.ಎಸ್.ಎಸ್ ಅಧಿಕಾರಿ ಡಾ. ಆರ್ ವೆಂಕಟಾಚಲಪತಿ ಸೇರಿದಂತೆ ಅನೇಕ ಗಣ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
