ಕೋಲಾರ ಜಿಲ್ಲೆಯು ಬರಪೀಡಿತ ಜಿಲ್ಲೆಯಾಗಿದ್ದು ನೀರಿನ ಸಮಸ್ಯೆ ಇದ್ದರೂ ಸಹ ರೈತರು ಇರುವ ನೀರನ್ನು ಸಮರ್ಪವಾಗಿ ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ. ಅವರಲ್ಲಿ ಮುಳಬಾಗಿಲು ತಾಲ್ಲೂಕಿನ ಚಾಮರೆಡ್ಡಿಹಳ್ಳಿ ಗ್ರಾಮದ ರೈತರಾದ ಸೀತಮ್ಮ ಅವರು ಅಣಬೆ ಬೇಸಾಯದ ಮೂಲಕ ಆದಾಯ ಮೂಲವನ್ನು ಕಂಡು ಕೊಂಡಿದ್ದಾರೆ.
ಅವರು ಸ್ತ್ರೀ ಶಕ್ತಿ ಸಂಘದ ಸಹಯೋಗದೊಂದಿಗೆ “ಸಮೃದ್ಧಿ” ಅಣಬೆ ಬೇಸಾಯ ಘಟಕವನ್ನು ನಿರ್ಮಿಸಿಕೊಂಡು, ಅಣಬೆ ಉತ್ಪಾದನೆಯನ್ನು ಮಾಡುತ್ತಿದ್ದಾರೆ. ಇವರು ಹುಳಿಮಾವು ಕ್ಷೇತ್ರದಿಂದ ಅಣಬೆ ಬೇಸಾಯದ ಬಗ್ಗೆ ತರಬೇತಿಯನ್ನು ಪಡೆದುಕೊಳ್ಳುವುದರ ಜೊತೆಗೆ ತೋಟಗಾರಿಕೆ ಇಲಾಖೆ ವತಿಯಿಂದ ತಾಂತ್ರಿಕ ಮಾಹಿತಿ, ಸಲಹೆಗಳು ಮತ್ತು ಆರ್ಥಿಕ ನೆರವು ಸಹಾಯಧನದ ವಿವರಗಳನ್ನು ಪಡೆದುಕೊಂಡು ಅದರಂತೆ ಕಾರ್ಯೋನ್ಮುಕರಾಗಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಘಟಕಕ್ಕೆ ಕೊಯ್ಲೋತ್ತರ ತಾಂತ್ರಿಕತೆ ಅಭಿವೃದ್ಧಿ ಕಾರ್ಯಕ್ರಮದಡಿ, ಇಲಾಖೆಯ ವತಿಯಿಂದ ಅಣಬೆ ಬೇಸಾಯ 2017-18 ನೇ ಸಾಲಿನಲ್ಲಿ ಶೇ. 40 ರಷ್ಟು ಸಹಾಯಧನವನ್ನು ಪಡೆದುಕೊಂಡು. ಆಯಿಸ್ಡರ್ ಮತ್ತು ಮಿಲ್ಕಿ ಅಣಬೆಯ್ನನು ಉತ್ಪಾದನೆಯನ್ನು ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಆಯಿಸ್ಡರ್ ಅಣಬೆಗೆ ಹೆಚ್ಚಿನ ಬೇಡಿಕೆ ಇದ್ದು ವಾರದಲ್ಲಿ 3 ದಿನಕ್ಕೆ 30 ರಿಂದ 40 ಕೆ.ಜಿ ಯಂತೆ ಉತ್ಪಾದನೆ ಮಾಡುತ್ತಾರೆ. ಈ ಅಣಬೆಗೆ ಪ್ರತಿ ಕೆ.ಜಿಗೆ 200 ರೂನಂತೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಅದೇ ರೀತಿ ಮಿಲ್ಕಿ ಅಣಬೆಯು ದಿನಕ್ಕೆ 20 ರಿಂದ 25 ಕೆ.ಜಿ ಉತ್ಪಾದನೆಯಾಗುತ್ತಿದೆ. ಇದಕ್ಕೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಿಗುತ್ತಿದ್ದು ಪ್ರತಿ ಕೆ.ಜಿಗೆ 200 ರೂನಂತೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ.
ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅಂತೆಯೇ ಕೃಷಿ ಕ್ಷೇತ್ರದಲ್ಲಿಯೂ ಸಹ ತನ್ನದೇ ಸಾಧನೆಯನ್ನು ಮಾಡಿ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಅಣಬೆ ಬೇಸಾಯದ ಮೂಲಕ ಆರ್ಥಿಕ ಸ್ವಾವಲಂಬಿಯಾಗಿ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಮಾದರಿಯಾಗಿರುವ ಸೀತಮ್ಮ ತಮ್ಮಂತೆ ಇತರರೂ ಅಣಬೆ ಬೇಸಾಯವನ್ನು ಮಾಡಿ ಸ್ವಯಂ-ಉದ್ಯೋಗಿಗಳಾಗಿ ಆರ್ಥಿಕ ಸ್ವಾವಲಂಬಿಗಳಾಗಲು ಪ್ರೇರಣೆಯಾಗಿದ್ದಾರೆ.
ಸುಪ್ರಿಯ.ಕೆ – ಅಪ್ರೆಂಟಿಸ್
ವಾರ್ತಾ ಮತ್ತು ಸಂಪರ್ಕ ಇಲಾಖೆ ಕೋಲಾರ