ಶಿವಮೊಗ್ಗ : ಮೇ 02 : ; ಯಾವ ನಾಡಿನಲ್ಲಿ ಆರೋಗ್ಯ
ಸೇವೆಗೆ ಒತ್ತು ನೀಡಲಾಗುತ್ತದೆಯೋ, ಅಲ್ಲಿನ ಸಮಾಜ ಸ್ವಾಸ್ಥ್ಸಸಮಾಜವಾಗಿರುತ್ತದೆ. ಅದರಿಂದಾಗಿ ಅಲ್ಲಿನ ಜನರ ಆರ್ಥಿಕ ಪ್ರಗತಿ ಆಶಾದಾಯಕವಾಗಿರುತ್ತದೆ. ಮಾತ್ರವಲ್ಲ ದೇಶದ ಆರ್ಥಿಕಪ್ರಗತಿಯಲ್ಲಿಯೂ ಅದನ್ನು ಗುರುತಿಸಲಾಗುತ್ತದೆ ಎಂದು ರಾಜ್ಯ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|| ಕೆ.ಸುಧಾಕರ್ ಅವರು ಹೇಳಿದರು.
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಘಟಕ ಶಿಕಾರಿಪುರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಶಿಕಾರಿಪುರ ಪಟ್ಟಣದಲ್ಲಿರುವ
ಸಾರ್ವಜನಿಕ ಆಸ್ಪತ್ರೆಯನ್ನು 3250ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳಿಂದ 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ
ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿ, ಶಿರಾಳಕೊಪ್ಪ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳಿಂದ 50
ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿ ಮತ್ತು ಶಿಕಾರಿಪುರ ಪಟ್ಟಣದಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 520ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ 60 ರಿಂದ 100
ಹಾಸಿಗೆಗಳಿಗೆ ಮತ್ತು 100 ರಿಂದ 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಮಲೆನಾಡಿನ ಹೆಬ್ಬಾಗಿಲಂತಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಆಯುರ್ವೇದ ಸಸ್ಯ ಸಂಪತ್ತು ಹೇರಳವಾಗಿದೆ. ಅದನ್ನು ಗಮನಿಸಿ, ಇಲ್ಲಿನ ಜನರಿಗೆ
ಆರೋಗ್ಯ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಆಯುಷ್ವಿ ಶ್ವವಿದ್ಯಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮುಂದಿನ ಒಂದು
ತಿಂಗಳಲ್ಲಿ ಆಯುಷ್ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಸರ್ವರಿಗೂ ಆರೋಗ್ಯ ಸೇವೆಯನ್ನು ಒದಗಿಸುವ
ಸದುದ್ದೇಶದಿಂದಲೇ ದೇಶದ ಪ್ರಧಾನಮಂತ್ರಿಗಳು ಆಯುಷ್ಮಾನ್ಭಾರತ್ ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಿ
ಅನುಷ್ಠಾನಗೊಳಿಸಿದ್ದಾರೆ. ಈ ಯೋಜನೆಯಡಿ ಬಿ.ಪಿ.ಎಲ್., ಮತ್ತು ಎ.ಪಿ.ಎಲ್. ಕುಟುಂಬದ ಎಲ್ಲರೂ ಉಚಿತವಾಗಿ ಆರೋಗ್ಯ ಸೇವೆಯನ್ನು
ಪಡೆಯಬಹುದಾಗಿದೆ. ದೇಶದ ಸುಮಾರು 50ಕೋಟಿ ಜನರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿರುವುದು ಸಂತಸದ
ಸಂಗತಿಯಾಗಿದೆ. ಎಲ್ಲರಿಗೂ ಆರೋಗ್ಯ- ಎಲ್ಲೆಡೆಯೂ ಆರೋಗ್ಯ ಎಂಬ ಘೋಷವಾಕ್ಯದಂತೆ ಸಮಗ್ರ ಆರೋಗ್ಯ ಸೇವೆ ಒದಗಿಸುವುದು
ಮೋದೀಜಿಯವರ ಆಶಯವಾಗಿದೆ ಎಂದರು