ಶಿವಮೊಗ್ಗ, ಸೆಪ್ಟೆಂಬರ್ 14 : ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ‘ಸ್ವಚ್ಛತಾ ಹಿ ಸೇವಾ’ ಎಂಬ ವಿಶೇಷ ಜನಾಂದೋಲನವನ್ನು ಸೆ.15 ರಿಂದ ಅ.2 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ತಿಳಿಸಿದ್ದಾರೆ.
ಅ. 2 ರಂದು ಮಹಾತ್ಮಾ ಗಾಂಧೀಜಿ ಜನ್ಮದಿನದ ಸ್ಮರಣಾರ್ಥವಾಗಿ ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮರ ಧ್ಯೆಯವಾಕ್ಯ ‘ಸ್ವಚ್ಛತೆಯೇ ದೈವತ್ವ’ ಎ0ಬ ಕನಸನ್ನು ನನಸಾಗಿಸಲು ಸೆ.15 ರಿಂದ ಅ.2 ರವರೆಗೆ 15 ದಿನಗಳ ಕಾಲ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಹಿ ಸೇವಾ-ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತೀರ್ಮಾನಿಸಲಾಗಿದೆ.
ಈ ವರ್ಷದ ಸ್ವಚ್ಛತಾ ಹಿ ಸೇವಾ-ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಆಂದೋಲನದ ಘೋಷವಾಕ್ಯವಾಗಿ ‘ಕಸಮುಕ್ತ, ತ್ಯಾಜ್ಯಮುಕ್ತ ಭಾರತ’ ಎಂದು ಘೋಷಿಸಲಾಗಿದ್ದು, ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ, ಸಧೃಢ ಗ್ರಾಮಗಳನ್ನು ರೂಪಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ.
ಗ್ರಾಮಗಳ ಸ್ವಚ್ಛತೆಗೆ ಸ್ವಯಂ ಪ್ರೇರಿತರಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುವುದು. ಜಿಲ್ಲೆಯ ತಾಲೂಕು, ಗ್ರಾ.ಪಂ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ನದಿ ತೀರ, ಸಾಂಸ್ಥಿಕ, ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿಗಳು, ಸರ್ಕಾರಿ ಶಾಲೆ, ಅಂಗನವಾಡಿ ಮತ್ತು ನಾಲಾಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮತ್ತು ಸದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮದಾನ ಮತ್ತು ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡಲಾಗಿದೆ.
ಸ್ವಚ್ಛತಾ ಹಿ ಸೇವಾ-ಸ್ವಚ್ಛತೆಯೇ ಸೇವೆಯನ್ನು ಉತ್ತಮವಾಗಿ ಯಶಸ್ವಿಗೊಳಿಸಲು ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರ ಶ್ರಮ ಅಗತ್ಯವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.