ಶಿವಮೊಗ್ಗ, ಡಿಸೆಂಬರ್ 26 : ಶಿವಮೊಗ್ಗ ನಗರದ ಸರ್ವ ಜನೋಪಯೋಗಿ ಹಾಗೂ ಪ್ರತಿಷ್ಠಿತ ಕುವೆಂಪು ರಂಗಮಂದಿರವನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕುವೆಂಪು ರಂಗಮಂದಿರ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಂಗಮಂದಿರದ ಒಳಗೆ ಹೊಸದಾದ ಆಸನಗಳನ್ನು ಅಳವಡಿಸಲು, ಶೌಚಾಲಯಗಳನ್ನು ದುರಸ್ತಿಗೊಳಿಸಲು, ಕಟ್ಟಡದ ಸುಣ್ಣ-ಬಣ್ಣ ಮಾಡಿಸಿ ಅಂದಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ರಂಗಮಂದಿರದ ವೇದಿಕೆಯನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಅಂತೆಯೇ ಧ್ವನಿವರ್ಧಕವೂ ಶೃತಿಸಹ್ಯವಾಗಿರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕುವೆಂಪು ರಂಗಮಂದಿರದ ಹೊರ ಭಾಗದಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರದ ವೇದಿಕೆಯ ಮೇಲ್ಭಾಗದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಕಾರ್ಯಕ್ರಮ ನಡೆಸಲು ತೀವ್ರ ಅಡಚಣೆ ಉಂಟಾಗಿರುವುದನ್ನು ತಿಳಿಯಲಾಗಿದೆ. ಕೂಡಲೇ ಆ ವಿದ್ಯುತ್ ತಂತಿಗಳನ್ನು ತೆರೆವುಗೊಳಿಸುವಂತೆ ಮೆಸ್ಕಾಂ ಅಭಿಯಂತರರಿಗೆ ಸೂಚಿಸಿದರು.
ಕುವೆಂಪು ರಂಗಮಂದಿರದ ಬಾಡಿಗೆಯಿಂದ ಕಡಿಮೆ ಪ್ರಮಾಣದ ಆದಾಯ ಬರುತ್ತಿದ್ದು, ನಿರ್ವಹಣೆ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಕಾರ್ಯಕ್ರಮಗಳಿಗೆ ದರ ಇಳಿಸಿ, ಖಾಸಗಿ ಕಾರ್ಯಕ್ರಮಗಳಿಗೆ ಶೇ.10ರಿಂದ 25ರಷ್ಟು ಶುಲ್ಕ ಹೆಚ್ಚಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಅವರಿಗೆ ಸೂಚಿಸಿದರು.
ರಂಗಮಂದಿರ ಕಾಯ್ದಿರಿಸಿದವರಿಗೆ ರಂಗಮಂದಿರದ ಬ¯ಭಾಗದ ಪಾರ್ಕಿಂಗ್ ಸ್ಥಳದಲ್ಲಿ ಸ್ಟಾಲ್ ಹಾಕಲು ಬಾಡಿಗೆ ಮತ್ತು ಕರಾರಿನ ಮೇಲೆ ಅನುಮತಿಸಲು ಸೂಚಿಸಿದ ಅವರು, ಅಲ್ಲಿನ ಸ್ವಚ್ಚತೆಯನ್ನು ಕಾಯ್ದುಕೊಳ್ಳಲು ಹಾಗೂ ಅಲ್ಲಿನ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಲು ಅವರು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!