ಶಿವಮೊಗ್ಗ, ಜೂನ್.26 : ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಮ ಪ್ರಮಾಣದ ಅನುದಾನ ಬಿಡುಗಡೆಯಾಗಿದ್ದು ಒಟ್ಟು ಮೊತ್ತ 222ಕೋಟಿ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಬಿಡುಗಡೆಯಾಗಲಿರುವ 1 ಸಾವಿರ ಕೋಟಿ ರೂಗಳ ಅನುದಾನದಲ್ಲಿ 968.32 ಕೋಟಿ ವೆಚ್ಚದ 53 ಯೋಜನೆಗಳನ್ನು ಅನುಷ್ಠಾನಗೊಳಿಸಲು ಮೊದಲ ಹಂತದಲ್ಲಿ 467.80ಕೋಟಿ ಮೊತ್ತದ 26 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಪಾಲಿಕೆ ಆಯುಕ್ತೆ ಚಾರುಲತ ಸೋಮಲ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ 66 ಲಕ್ಷ ರೂಗಳ ಎರಡು ಯೋಜನೆಗಳು ಮುಕ್ತಾಯ ಹೊಂದಿದ್ದು 326.83 ಕೋಟಿ ರೂಗಳ 13 ಯೋಜನೆಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. 99.84 ಕೋಟಿ ಮೊತ್ತದ 8 ಕಾಮಗಾರಿಗಳಿಗೆ ಯೋಜನಾ ವರದಿ ತಯಾರಿಸಲಾಗಿದ್ದು ಸಕ್ಷಮ ಪ್ರಾಧಿಕಾರದ ಅನುಮೋದನೆಗೆ ಕಾಯುತ್ತಿದ್ದೇವೆ ಎಂದು ಅವರು ತಿಳಿಸಿದರು.
32 ಕೋಟಿಯ 6 ಕಾಮಗಾರಿಗಳಿಗೆ ವರದಿ ತಯಾರಿಸಲಾಗಿದ್ದು ಖಾಸಗಿ ಸಹಭಾಗಿತ್ವದಲ್ಲಿ ಸಹ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳತ್ತಿದ್ದೇವೆ ಎಂದು ಅವರು ತಿಳಿಸಿದರು. ಸರ್ಕಾರದ ಯೋಜನೆಗಳ ಅಡಿಯಲ್ಲಿ 328.52 ಕೋಟಿ ಮೊತ್ತದ 9 ಕಾಮಗಾರಿಗಳು ಹಾಗೂ 355 ಕೋಟಿ ವೆಚ್ಚದ 6 ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿದ್ಯುತ್ ದೀಪದ ಕಂಬಗಳು ಹಾಗೂ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಚರಂಡಿ ಅಭಿವೃದ್ಧಿಗಾಗಿ 366.70 ಕೋಟಿ ಮೊತ್ತದ ಹಣವನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಇನ್ನುಳಿದಂತೆ ತುಂಗಾ ಎಡ ನಾಲೆಯ ಎರಡು ದಂಡೆಗಳಲ್ಲೂ ಉದ್ಯಾನವನ, ಯೋಜನೆ ವ್ಯಾಪ್ತಿ ಪ್ರದೇಶಗಳಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವ ಮೂಲಕ ಹಸಿರೀಕರಣದ ಆಲೋಚನೆಯಿದ್ದು ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಪ್ರಮುಖ ಯೋಜನೆಗಳು: 17 ಸ್ಥಳಗಳಲ್ಲಿ ಸ್ಮಾರ್ಟ್ ತಂಗುದಾಣ ನಿರ್ಮಾಣ-18.50 ಕೋಟಿ, ಶಿವಪ್ಪನಾಯಕ ಅರಮನೆ ಅಭಿವೃದ್ಧಿ-18.50 ಕೋಟಿ, ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಸ್ಥಳದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ, ಕಾರ್ ಪಾರ್ಕಿಂಗ್ ಸಂಕೀರ್ಣ-30 ಕೋಟಿ, 15 ಸ್ಥಳಗಳಲ್ಲಿ ಸ್ಮಾರ್ಟ್ ಗ್ರಂಥಾಲಯ- 3.48 ಕೋಟಿ, ನೆಹರೂ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ದರ್ಜೆಗೆ ಉನ್ನತೀಕರಣಗೊಳಿಸುವುದು-24.85 ಕೋಟಿ, 35 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಶೀಕ್ಷಣ ಸೌಲಭ್ಯ- 15 ಕೋಟಿ.