- ಡಾ||ರಾಜೇಶ್ ಸುರಗೀಹಳ್ಳಿ
ಶಿವಮೊಗ್ಗ. ಮೇ 29 : ಜಿಲ್ಲೆಯಲ್ಲಿ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಗರದ ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳ ಆಡಳಿತ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕೊರೋನ ನಿಯಂತ್ರಣದಲ್ಲಿ ಕೈಗೊಳ್ಳಬಹುದಾದ ಜನಸ್ನೇಹಿ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.
ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿಯೂ ಬೆಡ್ ಬ್ಲಾಕ್ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ತ್ರಯಾಜ್ ಕೇಂದ್ರದಲ್ಲಿ ವೈದ್ಯರ ಸಲಹೆ ಪಡೆದು ಹೊರಬರುವ ಸೋಂಕಿತರಿಗೆ ಅವರು ಬಯಸುವ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಕಾಯ್ದಿರಿಸುವಂತೆ ಸೂಚಿಸಿದ ಅವರು, ಇದರ ವ್ಯವಸ್ಥಿತ ನಿರ್ವಹಣೆಗಾಗಿ ಮೆಗ್ಗಾನ್ ಅಧೀಕ್ಷರ ಡಾ||ಶ್ರೀಧರ್ ಮತ್ತು ಡಾ|| ಮಂಜುನಾಥ ನಾಗಲೀಕರ್ ಅವರನ್ನು ನಿಯೋಜಿಸಲಾಗಿದೆ ಎಂದರು.
ಕೆಲವು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸಾಲಯಕ್ಕೆ ಭೇಟಿ ನೀಡಿ, ರೋಗಿಗಳ ದಾಖಲಾತಿ, ಅಲ್ಲಿನ ವ್ಯವಸ್ಥೆ ಮುಂತಾದ ವಿಷಯಗಳ ಕುರಿತು ವಾಸ್ತವ ಪರಿಶೀಲಿಸಿ ಕ್ರಮ ವಹಿಸುವರು. ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದಲ್ಲಿ ಅಂತಹ ಆಸ್ಪತ್ರೆಯ ಆಡಳಿತಾಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದರು.
ಹೆಚ್ಚಿನ ಚಿಕಿತ್ಸೆಗಾಗಿ ದೂರದ ಹೊರ ಊರುಗಳಿಗೆ ಶಿಫಾರಸ್ಸು ಮಾಡುವಾಗ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಬೇಕು. ರೋಗಿಯು ಪ್ರಯಾಣ ಆರಂಭಿಸುವ ಪೂರ್ವದಲ್ಲಿ ರೋಗಿಯ ಆರೋಗ್ಯ ಸ್ಥಿರತೆ ಹಾಗೂ ಆತನ ದೈಹಿಕ ಕ್ಷಮತೆ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಒಂದು ವೇಳೆ ಪ್ರಯಾಣದ ನಡುವೆ ರೋಗಿಯ ಆರೋಗ್ಯದಲ್ಲಿ ಏರುಪೇರಾದಲ್ಲಿ ಮುಂದಿನ ಆಗುಹೋಗುಗಳಿಗೆ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಆರೋಗ್ಯ ಇಲಾಖೆಗೆ ನೀಡಿದ ಮಾಹಿತಿಯಂತೆ ಆಸ್ಪತ್ರೆಗಳಲ್ಲಿ ಕಲ್ಪಿಸಲಾಗಿರುವ ಹಾಸಿಗೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಸಾಮಥ್ರ್ಯಕ್ಕಿಂತ ಹೆಚ್ಚಿನ ಹಾಸಿಗೆಗಳನ್ನು ಕಲ್ಪಿಸಿದಲ್ಲಿ ಆರೋಗ್ಯ ಇಲಾಖೆಗೆ ಸೂಕ್ತ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಿ ಸಾಮಥ್ರ್ಯಕ್ಕಿಂತ ಹೆಚ್ಚಿನ ಹಾಸಿಗೆಗಳನ್ನು ಕಲ್ಪಿಸಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಅಡಚಣೆ ಅಥವಾ ವ್ಯತ್ಯಯಗಳುಂಟಾದಲ್ಲಿ ಆಸ್ಪತ್ರೆಯ ವಿರುದ್ಧ ನಿಯಮಾನುಸಾರ ಕ್ರಮ ಅನಿವಾರ್ಯವಾಗಲಿದೆ ಎಂದ ಅವರು, ನಿಯಮ ಉಲ್ಲಂಘಿಸಿದ ನಗರದ ಎರಡು ಪ್ರತಿಷ್ಠಿತ ಆಸ್ಪತ್ರೆಗಳಿಗೆ ನೋಟೀಸ್ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕೊರೋನ ಸೋಂಕಿತರಿಗೆ ಆಸ್ಪತ್ರೆಗಳಿಂದ ನೀಡಲಾಗುತ್ತಿರುವ ಸೌಲಭ್ಯಗಳು, ಸೋಂಕಿತರ ವಿವರ, ದಾಖಲಾತಿ, ಚಿಕಿತ್ಸೆ ಮುಂತಾದ ವಿವರಗಳನ್ನು ಫೆಸಿಲಿಟಿ ಆ್ಯಪ್‍ನಲ್ಲಿ ದಾಖಲಿಸುವಂತೆ ಸೂಚಿಸಿದ ಅವರು, ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ನಿಗಧಿಪಡಿಸಲಾಗಿರುವ ದರ, ಹಾಸಿಗೆಗಳ ಲಭ್ಯತೆ ಕುರಿತು ಆಸ್ಪತ್ರೆಯ ಸೂಚನಾಫಲಕದಲ್ಲಿ ಕಡ್ಡಾಯವಾಗಿ ಮಾಹಿತಿ ಅಳವಡಿಸುವಂತೆ ಸೂಚಿಸಿದರು.
ಸೋಂಕಿತರಿಗೆ ನೀಡುವ ಚಿಕಿತ್ಸೆ ಪ್ರತಿ ವ್ಯಕ್ತಿಗೆ, ಆತನು ಹೊಂದಿರುವ ಗುಣಲಕ್ಷಣಗಳ ಆಧಾರದ ಮೇಲೆ ಆಗಾಗ್ಗೆ ಬದಲಾವಣೆಗಳುಂಟಾಗುತ್ತಿವೆ. ಆದ್ದರಿಂದ ವೈದ್ಯರು ತಜ್ಞವೈದ್ಯರೊಂದಿಗೆ ಸಕಾಲಿಕ ಸಮಾಲೋಚನೆ ನಡೆಸಲು ಅನುಕೂಲವಾಗುವಂತೆ ಸೃಜಿಸಲಾಗಿರುವ ಮೊಬೈಲ್ ಗುಂಪಿಗೆ ಸೇರ್ಪಡೆಗೊಳ್ಳುವಂತೆ ಅವರು ಸಲಹೆ ನೀಡಿದರು.
ಚಿಕಿತ್ಸೆಗಾಗಿ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಮೃತ ವ್ಯಕ್ತಿಯ ಕಳೆಬರಹವನ್ನು ಮೃತನ ಸಂಬಂಧಿಕರಿಗೆ ಹಸ್ತಾಂತರಿಸುವಲ್ಲಿ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಇಂತಹ ಸಂಧಿಗ್ಧ ಸಂದರ್ಭದಲ್ಲಿ ಅನಾವಶ್ಯಕ ಚರ್ಚೆ, ಗಲಾಟೆಗೆ ಅವಕಾಶವಿಲ್ಲದಂತೆ ನಿಯಮಾನುಸಾರ ಸಕಾಲದಲ್ಲಿ ಒಪ್ಪಿಸುವಂತೆ ಅವರು ಸಲಹೆ ನೀಡಿದರು.
ಇಷ್ಟೆಲ್ಲ ಸಮಸ್ಯೆ ಸವಾಲುಗಳ ನಡುವೆಯೂ ಜಿಲ್ಲಾಡಳಿತದ ಕಾರ್ಯ ಹಾಗೂ ಸರ್ಕಾರಿ ಮತ್ತು ಆಸ್ಪತ್ರೆಗಳ ವೈದ್ಯಕೀಯ ಸೇವೆಯ ಕುರಿತು ರಾಜ್ಯದಲ್ಲಿಯೇ ಉತ್ತಮ ಅಭಿಪ್ರಾಯವಿದೆ. ಈ ಹೆಸರನ್ನು ಹಾಗೆಯೇ ಉಳಿಸಿಕೊಳ್ಳುವಲ್ಲಿಯೂ ನಮ್ಮ ಪ್ರಯತ್ನ ಅಗತ್ಯವಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕ ಡಾ|| ಶ್ರೀಧರ್, ಡಾ|| ಮಂಜುನಾಥ್ ನಾಗಲೀಕರ್ ಸೇರಿದಂತೆ ಸ್ಥಳೀಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.