ಶಿವಮೊಗ್ಗ: ಸಮಾಜಮುಖಿ ಸೇವೆಗಳ ಮುಖಾಂತರ ಸಮಾಜದಲ್ಲಿ ಅಗತ್ಯ ಇರುವವರಿಗೆ ನೆರವು ನೀಡುವ ಮಾನವೀಯ ಕಾರ್ಯ ನಡೆಸುತ್ತಿರುವ ಇನ್ನರ್ವ್ಹೀಲ್ ಅಂತರಾಷ್ಟ್ರೀಯ ಸಂಸ್ಥೆಯು ನೂರು ವರ್ಷ ಪೂರೈಸಿದೆ ಎಂದು ಇನ್ನರ್ವ್ಹೀಲ್ ಜಿಲ್ಲೆ 3182ರ ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್ ಹೇಳಿದರು.
ಶಿವಮೊಗ್ಗ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸ್ನೇಹ, ಪ್ರೀತಿ ಹಂಚಿಕೊಳ್ಳುವ ಜತೆಯಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಒಟ್ಟಾಗಿ ನಡೆಸುವ ಆಶಯದಿಂದ ಆರಂಭವಾದ ಸಂಸ್ಥೆ ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಇನ್ನರ್ವ್ಹೀಲ್ ಮಾಜಿ ಚರ್ಮನ್ ವಾರಿಜಾ ಜಗದೀಶ್ ಮಾತನಾಡಿ, ಇನ್ನರ್ವ್ಹೀಲ್ ನಂತಹ ಸಂಸ್ಥೆಯಲ್ಲಿ ತೊಡಗಿಸಿಕೊಂಡರೆ ಆತ್ಮವಿಶ್ವಾಸ ವೃದ್ಧಿಸುವುದು, ಭರಸವೆ, ಮಾನಸಿಕ ಸದೃಢತೆ ಜತೆಗೆ ಸಂತೋಷ ಸಿಗುತ್ತದೆ. ಬೇರೆ ಬೇರೆ ರಾಜ್ಯಗಳ ಮಹಿಳೆಯರ ಜತೆ ಸಂವಹನ ನಡೆಸುವುದರಿಂದ ನಾಯಕತ್ವ ಗುಣ ಹೆಚ್ಚಾಗುತ್ತದೆ ಎಂದರು.
ಇನ್ನರ್ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ನೂತನ ಅಧ್ಯಕ್ಷೆ ಶ್ವೇತಾ ಆಶಿತ್ ಮಾತನಾಡಿ, ನೂರನೇ ವರ್ಷ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ನೂರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೋಟ್ ಪುಸ್ತಕ, ರಸ್ತೆಬದಿ ಮಹಿಳಾ ವ್ಯಾಪಾರಿಗಳಿಗೆ ಛತ್ರಿ ಹಾಗೂ ಶಾಲೆಗೆ ಗಾಡ್ರೆಜ್ ಬೀರ್ ಕೊಡುಗೆಯಾಗಿ ನೀಡಿ ಸೇವಾ ಕಾರ್ಯ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಧುರಾ ಮಹೇಶ್ ಅವರಿಂದ ನೂತನ ಅಧ್ಯಕ್ಷರಾಗಿ ಶ್ವೇತಾ ಆಶಿತ್, ಉಮಾ ವೆಂಕಟೇಶ್ ಅವರಿದ ನೂತನ ಕಾರ್ಯದರ್ಶಿಯಾಗಿ ಡಿ.ಬಿ.ವಾಗ್ದೇವಿ ಅವರು ಅಧಿಕಾರ ಸ್ವೀಕರಿಸಿದರು. ನೂತನ ಪದಾಧಿಕಾರಿಗಳ ತಂಡ ಅಧಿಕಾರ ಸ್ವೀಕರಿಸಿದರು. ಪಿಯು ಪರೀಕ್ಷೆಯಲ್ಲಿ (96%) ಹೆಚ್ಚು ಅಂಕ ಗಳಿಸಿ ನಿತ್ಯ ಅವರಿಗೆ ಸನ್ಮಾನಿಸಲಾಯಿತು.
ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ಕುಮಾರ್, ರಾಜೇಶ್ವರಿ ಪ್ರತಾಪ್, ವೀಣಾ ಹರ್ಷ, ಜಯಂತಿ ವಾಲಿ, ವಿಜಯಾ ರಾಯ್ಕರ್, ನಿರ್ಮಲಾ ಮಹೇಂದ್ರ, ವೀಣಾ ಸುರೇಶ್, ವಾಣಿ ಪ್ರವೀಣ್, ಸುನಂದಾ ಜಗದೀಶ್, ಜ್ಯೋತಿ ಸುಬ್ಬೇಗೌಡ, ನಮಿತಾ ಸೂರ್ಯನಾರಾಯಣ, ಆಶಾ ಶ್ರೀಕಾಂತ್, ಶಿಲ್ಪಾ, ಕಲ್ಪನಾ, ಸೀತಾರತ್ನ, ಜ್ಯೋತಿ ಹಾಗೂ ಇನ್ನರ್ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.