ಶಿವಮೊಗ್ಗ, ಸೆ.27 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಶಿವಮೊಗ್ಗ ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಸಂಜೆ 4ಗಂಟೆಗೆ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಅವರು ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ ತಾಲೂಕುಗಳಲ್ಲಿ 47ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ನೆರವೇರಿಸುವರು. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ 6ಕೋಟಿ ವೆಚ್ಚದಲ್ಲಿ ಕಟ್ಟಡಗಳ ಉಳಿಕೆ ಕಾಮಗಾರಿ, 4.9ಕೋಟಿ ರೂ. ವೆಚ್ಚದ ಎಸ್.ಸಿ ಮತ್ತು ಎಸ್.ಟಿ. ವಿದ್ಯಾರ್ಥಿ ನಿಲಯ ಕಟ್ಟಡ, 5.50ಕೋಟಿ ರೂ. ವೆಚ್ಚದ ಇಂಟರ್ನ್ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ, 2ಕೋಟಿ ರೂ. ವೆಚ್ಚದ ಆಧುನಿಕ ಶವ ಪರೀಕ್ಷಾ ಕಟ್ಟಡ ಶಂಕು ಸ್ಥಾಪನೆ ನೆರವೇರಿಸುವರು.
ಹಳೆ ಜೈಲು ಆವರಣದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಫ್ರೀಡಂ ಪಾರ್ಕ್ ಹಾಗೂ ಇತ್ಯಾದಿ ಸಾರ್ವಜನಿಕ ಉಪಯೋಗದ ಕಾಮಗಾರಿಗಳ ಶಂಕುಸ್ಥಾಪನೆ, ಸ್ಮಾರ್ಟ್ ಸಿಟಿ ಯೋಜನೆಯಡಿ 90ಕೋಟಿ ರೂ. ವೆಚ್ಚದಲ್ಲಿ ಸೈಕಲ್ ಟ್ರ್ಯಾಕ್, ಲಕ್ಷ್ಮಿ ಚಿತ್ರಮಂದಿರ ವೃತ್ತದಿಂದ ಎನ್ಟಿ ರಸ್ತೆವರೆಗಿನ ಒಳ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳ ಶಂಕುಸ್ಥಾಪನೆ, 130ಕೋಟಿ ರೂ. ವೆಚ್ಚದಲ್ಲಿ ತುಂಗಾ ನದಿ ಉತ್ತರ ದಂಡೆಯನ್ನು ಮೂಲಭೂತ ಸೌಕರ್ಯ, ಪಾದಚಾರಿ ಸೇತುವೆ, ವಾಯ ವಿಹಾರಕ್ಕಾಗಿ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.
ಸ್ಥಳ ಪರಿಶೀಲನೆ: ಮುಖ್ಯಮಂತ್ರಿ ಅವರ ಸಾರ್ವಜನಿಕ ಸಭೆ ನಡೆಯಲಿರುವ ನಗರದ ಪೊಲೀಸ್ ಮೈದಾನಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಪೊಲೀಸ್ ಮೈದಾನದಲ್ಲಿ ಸಮಾರಂಭ ಆಯೋಜಿಸಲಾಗುತ್ತಿದೆ. ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಲು ಎಲ್ಲಾ ಸಿದ್ಧತೆಗಳನ್ನು ಆರಂಭಿಸುವಂತೆ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಪ್ರಕಾಶ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ್ ಎಚ್.ಟಿ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.