ನಗರದ ಮೆಗ್ಗಾನ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಎಲ್ಲಾ ಮೂಲಭೂತ ಸೌಲಭ್ಯ ಹಾಗೂ ಮಾನವ ಸಂಪನ್ಮೂಲವನ್ನು ಒದಗಿಸಿ, ರಾಜ್ಯದ ಮಾದರಿ ಆಸ್ಪತ್ರೆಯನ್ನಾಗಿ ರೂಪಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದರು. ಈ ಕುರಿತು ಕೋವಿಡ್ ಸೋಂಕಿತ ರೋಗಿಗಳಿಗೆ ಪ್ರತ್ಯೇಕವಾಗಿ ತಪಾಸಣಾ ಘಟಕವನ್ನು ಆರಂಭಿಸಲಾಗುವುದಲ್ಲದೇ ಆಸ್ಪತ್ರೆಗೆ ಭೇಟಿ ನೀಡುವ ಸಾಮಾನ್ಯ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದೆಂದವರು ನುಡಿದರು.
ಈ ಸಂಬಂಧ ಕೂಲಂಕಶವಾಗಿ ಚರ್ಚಿಸಲು ಜೂನ್ 08ರಂದು ಮೆಗ್ಗಾನ್ ಆಡಳಿತಾಧಿಕಾರಿಗಳು, ವೈದ್ಯರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದೆಂದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಬೇಕಾದ ಕೆಲಸಗಳು, ಬೇಕಾಗುವ ಯಂತ್ರಗಳು, ಈವರಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ, ತುರ್ತು ಅಗತ್ಯವಿರುವ ಅನುದಾನ ಹಾಗೂ ಹೊರಗುತ್ತಿಗೆ ಸಿಬ್ಬಂಧಿಗಳ ನೇಮಕಾತಿ ಮತ್ತು ವೇತನಗಳು ಮಾತ್ರವಲ್ಲದೆ ಸರ್ಕಾರದಿಂದ ತರಬೇಕಾದ ಅನುದಾನಗಳ ಕುರಿತು ಚರ್ಚಿಸಲಾಗುವುದೆಂದವರು ನುಡಿದರು.
ಪ್ರಸ್ತುತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಮಾತ್ರ ಕಾರ್ಯನಿರ್ವಹಿಸಲಿದೆ. ಇ.ಸಿ.ಜಿ., ಇಕೋ ಸೌಲಭ್ಯಗಳೂ ಸಹ ದೊರೆಯಲಿದೆ. ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸಾ ಘಟಕಗಳು ಆರಂಭಗೊಳ್ಳಲಿವೆ. ಉಳಿದಂತೆ ಕಾರ್ಡಿಯಾಲಜಿ ಹಾಗೂ ನ್ಯೂರೋಲಜಿ ಘಟಕಗಳು ತಕ್ಷಣದಿಂದಲೇ ಕಾರ್ಯಾರಂಭಿಸಲಿವೆ ಎಂದರು.
ಆಸ್ಪತ್ರೆಗೆ ತುರ್ತು ಅಗತ್ಯವಿರುವ ರೇಡಿಯಾಲಜಿ ತಜ್ಞರ ನೇಮಕಾತಿಗೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಲಾಗಿದೆ. ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಅಭ್ಯರ್ಥಿಗಳ ಶ್ರೇಣಿ ಮತ್ತು ಮೀಸಲಾತಿಯನುಸಾರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದ ಅವರು, ಈಗಾಗಲೇ ಈ ಹುದ್ದೆಗಳಿಗೆ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ನೇಮಕಾತಿ ಪ್ರಕ್ರಿಯೆಯ ನಿರ್ವಹಣೆಯ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆಯನ್ನಾಧರಿಸಿ, ಶಿಫ್ಟ್ ಆಧಾರದ ಮೇಲೆ ಕಾರ್ಯನಿರ್ವಹಿಸಲು ವೈದ್ಯರು ಹಾಗೂ ಅಗತ್ಯ ಸಿಬ್ಬಂಧಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಬಿ.ಅಶೋಕನಾಯ್ಕ್, ಮೇಯರ್ ಶ್ರೀಮತಿ ಸುವರ್ಣಶಂಕರ್, ಉಪಮೇಯರ್ ಶ್ರೀಮತಿ ಸುರೇಖಾ ಮುರಳೀಧರ್, ಸಿಮ್ಸ್ ಆಡಳಿತಾಧಿಕಾರಿ ಡಾ|| ಗುರುಪಾದಪ್ಪ ಕೆ., ಸರ್ಜನ್ ಡಾ|| ರಘುನಂದನ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯೆ ಡಾ|| ವಾಣಿಕೋರಿ, ದಿವಾಕರಶೆಟ್ಟಿ, ಜ್ಯೋತಿಪ್ರಕಾಶ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

error: Content is protected !!