ರಾಸಾಯನಿಕಗಳು ಉಪಯೋಗಿಸುವದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಾ ವಾತಾವರಣದ ಮಾಲಿನ್ಯದಿಂದ ಬೆಳೆಗಳ ಕಾಲ ಏರುಪೇರುಗಳು ಉಂಟಾಗುತ್ತದೆ. ಇದರಿಂದ ತರಕಾರಿಗಳು, ಹಣ್ಣುಗಳು, ಆಹಾರಧಾನ್ಯ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುತ್ತದೆ. ಕೃಷಿಯಲ್ಲಿ ಲಾಭಾಂಶದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಒಂದು ಹಿನ್ನಲೆಯನ್ನು ನೋಡಿದಾಗ ಕೃಷಿಯು ನಮ್ಮ ದೇಶದ ಬೆನ್ನಲುಬು ಆಗಿದ್ದರಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಮಣ್ಣು ಮತ್ತು ಅದರ ಫಲವತ್ತತೆ ಹಾಳಾಗುವುದನ್ನು ತಡೆಗಟ್ಟಲು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದು ಬಹಳಷ್ಟು ಸಹಾಯಕಾರಿಯಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಪೂರ್ತಿಯಾಗಿ ಕೃಷಿಯ ರಸಗೊಬ್ಬರದ ಬಳಕೆ ಹಾಗೂ ರಾಸಾಯನಿಕವಾಗಿ ರೋಗ ಮತ್ತು ಕೀಟಗಳ ನಿರ್ವಹಣೆಯು ಅಸಾಧ್ಯವೆನ್ನುವ ಅಂಶ ನಮ್ಮೆಲ್ಲರ ಮನದಲ್ಲಿ ಗಾಢವಾಗಿದೆ. ಈ ನಿಟ್ಟಿನಲ್ಲಿ ರೈತರ ಪ್ರಯತ್ನಗಳು ಹೆಚ್ಚು ಸಾಗಿದ್ದು ಅದಕ್ಕೆ ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ ಒದಗಿಸುವ ಅವಶ್ಯಕತೆಯಿದೆ.
ಸಾವಯುವ ಬೇಸಾಯ ಕ್ರಮಗಳು :
- ಭೂಮಿ ತಯಾರಿಕೆ ಮತ್ತು ಪೋಷಕಾಂಶಗಳ ಪೂರೈಕೆ :
ಹಿಂದಿನ ಕಾಲದಿಂದ ನಮ್ಮ ರೈತರು ಕಾಲಾನುಸಾರವಾಗಿ ಮಾಗಿ ಉಳುಮೆ ಅನುಸರಿಸುತ್ತಾ ಬಂದಿದ್ದಾರೆ. ಇದು ಪದ್ಧತಿಯು ಬಹಳಷ್ಟು ವೈಜ್ಞಾನಿಕವಾಗಿದೆ. ಇದರಿಂದ ಭೂಮಿಯಲ್ಲಿರುವ ಕೀಟ, ಕೋಶಗಳು, ಅಂಡಾಂಶಯಗಳು ಮತ್ತು ರೋಗಾಣುಗಳು ಸೂರ್ಯನ ಪ್ರಕಾಶ ಶಾಖದಿಂದ ನಾಶವಾಗುತ್ತವೆ. ಮಾಗಿ ಉಳುಮೆಯ ನಂತರ ಬಿತ್ತನೆಯ ಮೊದಲು ಭೂಮಿ ಸಿದ್ಧಗೊಳಿಸುವಾಗ ಭೂಮಿಯನ್ನು ಹದ ಮಾಡಿ ಪ್ರತಿ ತರಕಾರಿ ಬೆಳೆಗೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಇಲ್ಲವೆ ಎರೆಗೊಬ್ಬರ ಮತ್ತು ಶಿಫಾರಿತ ಪೋಷಕಾಂಶ ಒದಗಿಸಲು ಹೆಚ್ಚಿನ ಗೊಬ್ಬರ ಅಥವಾ ಇತರೆ ತರಹದ ಗೊಬ್ಬರಗಳನ್ನು ಉಪಯೋಗಿಸಬಹುದು. ಜೊತೆಗೆ ಮಣ್ಣಿನಲ್ಲಿರುವ ರೋಗಾಣು, ಕೀಟಗಳು ಮತ್ತು ಕೋಶಗಳ ಕೊಲ್ಲುವ ಬೇವಿನ ಹಿಂಡಿ ಅಥವಾ ಹೊಂಗೆಹಿಂಡಿ ಮತ್ತು ಸೂಕ್ಷ್ಮ ಜೀವಿಗಳು ಹಾಗೂ ಜೈವಿಕ ಶಿಲೀಂಧ್ರನಾಶಕಗಳಿಂದ ಉಪಚರಿತ ತಿಪ್ಪೆಗೊಬ್ಬರ ಬಳಸಬಹುದಾಗಿದೆ. - ಎರೆಗೊಬ್ಬರ ಮತ್ತು ಕೊಟ್ಟಿಗೆ/ಕಾಂಪೊಸ್ಟ ಗೊಬ್ಬರ :
ಎರೆಹುಳುಗಳಿಂದ ತಯಾರಾದ ಗೊಬ್ಬರ, ಎರೆಗೊಬ್ಬರ ಇದರಲ್ಲಿ ರಸಸಾರ ಪ್ರಮಾಣ 6.5 ರಿಂದ 8ರ ವರೆಗೆ ಇರುತ್ತದೆ. ಇದರಲ್ಲಿ ಮುಖ್ಯವಾಗಿ ಇರುವ ಪೋಷಕಾಂಶಗಳೆಂದರೆ ಸಾರಜನಕ, ರಂಜಕ, ಪೊಟ್ಯಾಷ್, ಸತು, ತಾಮ್ರ, ಕಬ್ಬಿಣ, ಮ್ಯಾಂಗನಿಜ, ಬೋರಾನ್, ಮ್ಯಾಗ್ನೆಶಿಯಂ, ಜಿಂಕ್ ಮತ್ತು ವಿಟಮಿನ್ಗಳು ಹೊಂದಿದೆ. - ಹಸಿರೆಲೆ ಗೊಬ್ಬರ :
ಯಾವುದೇ ಗಿಡ/ಮರ/ಕಸದ ಎಲೆ, ಕಾಂಡ ಮತ್ತು ಇತರೆ ಭಾಗಗಳನ್ನು ಹಸಿರಿದ್ದಾಗಲೇ ಮಣ್ಣಿಗೆ ಬೆರೆಸಿ/ಮಗ್ಗು ಹೊಡೆದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಕ್ಕೆ ಹಸಿರೆಲೆ ಗೊಬ್ಬರ ಎಂದು ಕರೆಯುತ್ತಾರೆ. ಉದಾಹರಣೆಗೆ: ಸೆಣಬು, ಡಯೆಂಚಾ, ಚೊಗಚಿÉ, ಸ್ಟ್ರೆಲೊಸ್ಯಾಂತಾಸ್,ಗ್ಲಿರಿಸಿಡಿಯಾ, ಹೊಂಗೆ ಮತ್ತು ಬೇವಿನ ತಪ್ಪಲು/ಎಲೆಗಳು ಮುಂತಾದವುಗಳು. - ಕೊಟ್ಟಿಗೆ/ಕಾಂಪೋಸ್ಟ ಗೊಬ್ಬರ :
ಈ ಗೊಬ್ಬರವು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೇರಳವಾಗಿ ಸಿಗುವ ಗೊಬ್ಬರ ಈ ಗೊಬ್ಬರದಲ್ಲಿ ಗಣನೆಗೆ ಒಳಪಟ್ಟ ರಸಸಾರ 7.8 ರಿಂದ 8 ಇರುತ್ತದೆ. ಈ ಗೊಬ್ಬರದಲ್ಲಿ ಮುಖ್ಯವಾಗಿ ಸಾರಜನಕ, ರಂಜಕ ಪೊಟ್ಯಾಷಿಯಂ ಮತ್ತು ಇತರೆ ಲಘು ಪೋಷಕಾಂಶಗಳನ್ನು ಹೊಂದಿರುತ್ತದೆ. - ಹಿಂಡಿಗಳು :
ಬೇವು, ಸೋಪನಟ್, ಹೊಂಗೆ, ಶೇಂಗಾ, ಕುಸುಬೆ ಹಾಗೂ ಇನ್ನಿತರ ಆಹಾರಕ್ಕೆ ಯೋಗ್ಯವಲ್ಲದ ಹಿಂಡಿಗಳನ್ನು ಸಸ್ಯ ಪೋಷಕಾಂಶಗಳಾಗಿ ಬಳಸಬಹುದು. ಸರಿಸುಮಾರು ಪ್ರತಿ ಹೆಕ್ಟೇರಿಗೆ 250-500 ಕಿ. ಗ್ರಾಂ. ನಷ್ಟು ಪ್ರಮಾಣದಲ್ಲಿ ಮಣ್ಣಿಗೆ ಬೆರೆಸುವುದು ಸೂಕ್ತ. - ಜೈವಿಕ ಗೊಬ್ಬರಗಳು :
ಅತ್ಯಂತ ಕಡಿಮೆ ಖರ್ಚಿನ ಮತ್ತು ಕಡಿಮೆ ಪ್ರಮಾಣದಲ್ಲಿ ಬಳಸಬಹುದಾದ ಜೈವಿಕ ಗೊಬ್ಬರಗಳು, ಅಂದರೆದ್ವಿದಳ ಜಾತಿಗೆ ಸೇರಿದ ಬೆಳೆಗಳಲ್ಲಿ ರೈಜೋಬಿಯಂ, ಇತರೆ ಬೆಳೆಗಳಲ್ಲಿ ಅಜೋಸ್ಟೈರಿಲ್ಲಿಮ್, ಅಜಟೊಬ್ಯಾಸ್ಟರ್, ಸಾರಜನಕ ಸ್ಥಿರಿಕರಿಸಲು ಅಜೋಲ್ಲಾ, ನೀಲಿ ಹಸಿರು ಅಲ್ಗೆಗಳು, ರಂಜಕ ಕರಗಿಸುವ ಮತ್ತು ಸಾವಯುವ ಪದಾರ್ಥಗಳನ್ನು ಕೊಳಿಸುವ ಸೂಕ್ಷ್ಮಾಣು ಜೀವಿಗಳು, ರಂಜಕ ಒದಗಿಸುವ ಮೈಕೋರೈಜಾ ಶಿಲೀಂಧ್ರಗಳನ್ನು ಬಳಸುವದರಿಂದ ಬೆಳೆ ಉತ್ಪಾದನೆಯನ್ನು ಹೆಚ್ಚಿಸಬಹುದು ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು. - ಸಸ್ಯ ಪ್ರಚೋದಕಗಳು :
ವಿವಿಧ ಬೆಳೆಗಳಿಗೆ ಪ್ರಚೋದಕದಂತೆ ಹೂ ಮತ್ತು ಫಸಲು ಹೆಚ್ಚಿಸುವಲ್ಲಿ ಪರಿಣಮಕಾರಿಯಾಗುತ್ತದೆ. ಇದರ ಜೊತೆ ಜೊತೆಯಾಗಿ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುವುದು, ರೋಗ ನೀರೋಧಕ ಶಕ್ತಿ ಹೆಚ್ಚಿಸುವುದು, ಬೆಳೆವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಉದಾ : ಪಂಚಗವ್ಯ, ಅಮೃತಪಾನಿ, ಜೀವಾಮೃತ, ಬೀಜಾಮೃತ, ಎರೆಜಲ, ಬಯೋಡೈಜೆಸ್ಟರ್ ಸ್ಲರ್ರೀ, ಅಗ್ನಿಹೊತ್ರ. - ಸಸ್ಯ ಸಂರಕ್ಷಣೆಗಳು :
ಎ. ಕಷಾಯಗಳು : ಸಾವಯುವ ವಿಧಾನದಲ್ಲಿ ತರಕಾರಿ ಬೆಳೆಗಳಿಗೆ ತಗಲುವ ಕೆಲ ಕೀಟಗಳ ನಿರ್ವಹಣೆಗೆ ಸಸ್ಯ ಜನ್ಯ ಕಷಾಯಗಳು ಬಹು ಲಾಭದಾಯಕವಾಗಿವೆ. ಉದಾ: ಬೇವಿನ ಬೀಜದ ಕಷಾಯ, ಮೆಣಸಿನಕಾಯಿ ಕಷಾಯ, ಬಳ್ಳೊಳ್ಳಿ ಕಷಾಯ, ತುಳಸಿ ಕಷಾಯ, ಘನೇರಿ ಕಷಾಯ, ನೀರ್ಗುಡಿ ಕಷಾಯ ಮುಂತಾದವುಗಳು.
ಬಿ. ಜೈವಿಕ ಕ್ರಮಗಳು : - ರೈತ ಮಿತ್ರ ಕೀಟ : ಗುಳದಾಳಿ ಹುಳು, ಸಿಂಹನÀ ಕುದುರೆ, ಪುಟಾಣಿ ಹುಳು, ಹೇನು , ಜೇಡಿ ಹುಳು, ಟ್ರೈಕೊಗ್ರಾಮಾ ಮುಂತಾದವುಗಳು.
- ಉಪಯುಕ್ತ ಜೀವಾಣುಗಳು : ತರಕಾರಿ ಬೆಳೆಗಳಿಗೆ ಬಾಧಿಸುವ ಕೀಟಗಳ ನಿರ್ವಹಣೆಗಾಗಿ ಪರಿಸರಕ್ಕೆ ಹಾನಿ ಮಾಡದೇ ಇರುವ ಕೆಲ ಜೀವಿಗಳು ಮತ್ತು ಸಸ್ಯಗಳನ್ನು ಬಳಸಿಕೊಳ್ಳಬಹುದಾಗಿದೆ. ಉದಾ: ಸುಡೊಮೊನಾಸ್ ಫ್ಲುರಸೆಸ್ಸ್, ಬ್ಯಾಸಿಲಸ್ ಸಬ್ಲಿಟಿಸ್, ನ್ಯೊಮುರಿಯಾ ರಿಲೈ ಮೇಟಾರೈಜಿಯಂ ಅನಿಸೋಪ್ಲಿ, ಬ್ಯಾಸಿಲಸ್ ತುರಿಂಜನೆಸಿಸ್, ಬದಯಾಸಿಲಸ್ ಗ್ಯಾಲೇರಿ, ಎನ್ಪಿವಿ ಮುಂತಾದವುಗಳು.
ರೊಗ ನಿರ್ವಹಣೆ :
ಅತೀ ಕಡಿಮೆ ಖರ್ಚಿನಲ್ಲಿ ವಾತಾವರಣಕ್ಕೆ ಯಾವುದೇ ರೀತಿಯ ಹಾನಿ ಅಥವಾ ಮಾಲಿನ್ಯ ಉಂಟು ಮಾಡದೇ ರೈತರಿಗೆ ಹಾಗೂ ಕೃಷಿಗೆ ಉಪಯುಕ್ತ ಜೀವಿಗಳಿಗೆ ಹಾಗೂ ಜೈವಿಕ ಸಮತೋಲನ ಕಾಪಾಡುವಲ್ಲಿ ಸಹಾಯಕವಾಗಿ ತರಕಾರಿ ಬೆಳೆಗಳಿಗೆ ಮಣ್ಣಿನಿಂದ ಹಾಗೂ ಬೀಜಕ್ಕೆ ತಗಲುವ ಮೂಲಕ ಭಾಧಿಸುವ ಕೆಲ ರೋಗಗಳ ನಿಯಂತ್ರಣ ಮಾಡುವ ಶಕ್ತಿ ಟ್ರೈಕೊಡರ್ಮಾ ಶಿಲೀಂಧ್ರ ಮತ್ತು ಸುಡೋಮೊನಾಸ್ ಬ್ಯಾಕ್ಟೇರಿಯಾಕ್ಕಿದೆ. ಉದಾ : ಟ್ರೈಕೊಡರ್ಮಾ ಹಾರ್ಜೆನಿಯಂ, ಟ್ರೈಕೊಡರ್ಮಾ ವಿರಿಡೆ, ಸುಡೋಮೊನಾಸ್ ವಿರಿಡೆ, ಸುಡೋಮೊನಾಸ್ ಪ್ಲೊರೆಸೆನ್ಸ್ ಮುಂತಾದವುಗಳು.
ಸಾವಯುವ ಪದ್ಧತಿಯಲ್ಲಿ ಬೆಳೆದ ತರಕಾರಿಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಿಸುತ್ತಿದೆ. ಸಾವಯುವ ಪದ್ಧತಿಯಲ್ಲಿ ಬೆಳೆದ ತರಕಾರಿ/ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಲ್ಲದೇ ಮಣ್ಣಿನ ಗುಣಧರ್ಮವನ್ನು ಕಾಪಾಡಿಕೊಂಡು ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಬಹುದು. ಸಾವಯವ ವಸ್ತುಗಳನ್ನು ಬಳಸಿ ಟೊಮ್ಯಾಟೊ,ಬದನೆ, ಬೆಂಡೆ ಮೆಣಸಿನಕಾಯಿ, ಬಳ್ಳಿ ತರಕಾರಿ, ಈರುಳ್ಳಿ, ಸೊಪ್ಪು ಎಲ್ಲ ರಿತಿಯ ತರಕಾರಿ ಉತ್ಪಾದನೆ ಮಾಡುವುದು ಮತ್ತು ಎಲ್ಲ ಹಂತದಲ್ಲಿ ನಿರ್ವಹಣೆ ಮಾಡುವುದು ಸಾಧ್ಯದಲ್ಲಿ ಸಾಧ್ಯವಿಲ್ಲವೆಂದಾದರೂ ಲಭ್ಯವಿರುವ ಕೆಲವು ತಾಂತ್ರಿಕತೆ ಬಳಸಿ, ರಾಸಾಯನಿಕ/ವಿಷದ ಬಳಕೆ ತಗ್ಗಿಸಬಹುದಾಗಿದೆ.
ಡಾ. ಪಿ.ಎನ್. ವಾಸುದೇವ ನಾಯಕ್ ಡಾ. ಜಹೀರ್ ಅಹಮದ್ ಡಾ. ರಾಜು ಜಿ. ತೆಗ್ಗಳ್ಳಿ ,ಕೃಷಿ ವಿಜ್ಞಾನ ಕೇಂದ್ರ, ಆಳಂದ ರಸ್ತೆ, ಕಲಬುರಗಿ