ಶಿವಮೊಗ್ಗ, ಆಗಸ್ಟ್ 03 : ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾಗಿರುವ, ಕೈಬಿಟ್ಟು ಹೋಗಿರುವ ನಗರ ಭಾಗದ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು ಎಲ್ಲರೂ ಸಹಕರಿಸಬೇಕೆಂದು ಪಾಲಿಕೆ ಮಹಾಪೌರರಾದ ಶಿವಕುಮಾರ್ ತಿಳಿಸಿದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಕುರಿತು ಇಂದು ಮಹಾನಗರಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಗರ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಲಸಿಕಾ ವಂಚಿತ ಹಾಗೂ ಲಸಿಕೆ ಬಿಟ್ಟು ಹೋಗಿರುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಕೊಡಿಸಲು ಅಗತ್ಯವಾದ ಪ್ರಚಾರ, ವಾಹನ ವ್ಯವಸ್ಥೆ ಸೇರಿಂತೆ ಇತರೆ ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿದ ಅವರು ಪಾಲಿಕೆ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಸ್ವಸಹಾಯ ಸಂಘದ ಸದಸ್ಯರು ಇದರಲ್ಲಿ ಪಾಲ್ಗೊಂಡು ಲಸಿಕಾಕರಣ ಗುರಿ ಸಾಧಿಸಲು ಸಹಕರಿಸುವಂತೆ ಸೂಚಿಸಿದರು.
ಆರ್ಸಿಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ತೀವ್ರತರ ಮಿಷನ್ ಇಂದ್ರಧನುಷ್ ಅಭಿಯಾನ 3 ಸುತ್ತಿನಲ್ಲಿ ನಡೆಯಲಿದೆ. 2023 ರ ಆಗಸ್ಟ್ 7 ರಿಂದ 12, ಸೆಪ್ಟೆಂಬರ್ 11 ರಿಂದ 16, ಅಕ್ಟೋಬರ್ 9 ರಿಂದ 14 ನಡೆಯಲಿದೆ. ಈ ಸುತ್ತುಗಳಲ್ಲಿ ಲಸಿಕಾವಂಚಿತರಾದ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಗಳನ್ನು ಪಡೆಯಬೇಕು.
ನಗರ ವ್ಯಾಪ್ತಿ ಅದರಲ್ಲೂ ಹೈರಿಸ್ಕ್ ಏರಿಯಾ(ಹೆಚ್ಆರ್ಎ)ಗಳಾದ ಸ್ಲಂ, ಇಟ್ಟಿಗೆಭಟ್ಟಿಗಳು, ವಲಸಿಗರು ವಾಸಿಸುವ ಸ್ಥಳಗಳು, ನಗರ ಹೊರವಲಯ(ಪೆರಿ-ಅರ್ಬನ್) ಪ್ರದೇಶಗಳಲ್ಲಿ ಲಸಿಕಾವಂಚಿತರನ್ನು ಗುರುತಿಸಿ ಲಸಿಕೆ ನೀಡಬೇಕು. ಅದಕ್ಕೆ ಪಾಲಿಕೆ ವ್ಯಾಪ್ತಿಯ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಆರೋಗ್ಯ ನಿರೀಕ್ಷಕರ ನೆರವು ಅತ್ಯಗತ್ಯವಾಗಿದೆ. ಹಾಗೂ ಲಸಿಕಾಕರಣದ ಕುರಿತು ವಾರ್ಡ್ ಸಮಿತಿ, ಮಾಸ್ ಕಮಿಟಿಗಳ ಮೂಲಕ ಜಾಗೃತಿ ಮೂಡಿಸಬೇಕು. ನಗರ ವ್ಯಾಪ್ತಿ ಮತ್ತು ಹೆಚ್ಆರ್ಎ ಗಳಲ್ಲಿ ಲಸಿಕಾಕರಣಕ್ಕೆ ಸಹಕಾರಿಯಾಗುವಂತೆ ಪಾಲಿಕೆ ವಾಹನಗಳಲ್ಲಿ ಜಿಂಗಲ್ಸ್, ಮೈಕಿಂಗ್, ಟಾಂ ಟಾಂ ವ್ಯವಸ್ಥೆ ಮಾಡುವಂತೆ ಕೋರಿದರು.
ಜಿಲ್ಲೆಯಲ್ಲಿ (ಮೀಸಲ್ಸ್ ರುಬೆಲ್ಲಾ)ಎಂಆರ್-1 ಮತ್ತು ಎಂಆರ್-2 ಲಸಿಕಾಕರಣ ಶೇ.95 ಪ್ರಗತಿಯಾಗಿದೆ. ಬಿಟ್ಟುಹೋದ, ಲಸಿಕೆ ವಂಚಿತರಾದವರ ಬಗ್ಗೆ ಮನೆ ಮನೆ ಸರ್ವೇ ಕಾರ್ಯವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಡಿಸಲಾಗುತ್ತಿದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ನಗರ ಭಾಗದ ಹೆಚ್ಆರ್ಎ ಪ್ರದೇಶಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ನಗರ ಪ್ರದೇಶದಲ್ಲಿ 8 ಪಿಹೆಚ್ಸಿ, 28 ಸಬ್ ಸೆಂಟರ್ಗಳಿದ್ದು 26 ಸಬ್ ಸೆಂಟರ್ಗಳ 87716 ಮನೆಗಳ ಪೈಕಿ 84581 ಮನೆಗಳಲ್ಲಿ ಹೆಡ್ಕೌಂಟ್ ಸರ್ವೇ ಆಗಿದೆ.
ನಗರ ವ್ಯಾಪ್ತಿಯಲ್ಲಿ 2 ವರ್ಷದೊಳಗಿನ 450 ಮಕ್ಕಳು, 2 ರಿಂದ 5 ವರ್ಷದೊಳಗಿನ 07 ಮಕ್ಕಳು, 164 ಗರ್ಭಿಣಿಯರು ಮತ್ತು 13 ಹೆಚ್ಆರ್ಎ ಪ್ರದೇಶಗಳನ್ನು ಲಸಿಕೆ ನೀಡಲು ಗುರುತಿಸಲಾಗಿದೆ. ಈ ಲಸಿಕಾಕರಣದ ನಿಗಿದತ ಗುರಿ ತಲುಪಲು ಅಗತ್ಯವಾದ ಇತರೆ ಇಲಾಖೆಗಳ ಪಾತ್ರ ಕುರಿತು ವಿವರಿಸಿದರು.
ಹಾಗೂ ಯು-ವಿನ್ ಪೋರ್ಟಲ್ ಮೂಲಕ ಲಸಿಕೆ ಪಡೆಯುವ ಫಲಾನುಭವಿಗಳು ಆನ್ಲೈನ್ ನೋಂದಣಿ ಮಾಡಿಸಿಕೊಳ್ಳಬಹುದು. ಈ ಪೋರ್ಟಲ್ ಮೂಲಕ ಲಸಿಕಾ ಅಧಿವೇಶನ ಬುಕ್ ಮಾಡಿಕೊಳ್ಳಬಹುದು. ಲಸಿಕೆ ಕುರಿತಾಗಿ ಎಸ್ಎಂಎಸ್, ಸರ್ಟಿಫಿಕೇಟ್ ಪಡೆಯಬಹುದಾಗಿದ್ದು ಕೋವಿನ್ ರೀತಿಯಲ್ಲಿ ಇದು ಕೆಲಸ ಮಾಡಲಿದೆ ಎಂದರು.
ಸಭೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿ(ಪ್ರ) ರೇಖಾ, ಸಿಡಿಪಿಓ ಚಂದ್ರಪ್ಪ, ಸೀನಿಯರ್ ಆರೋಗ್ಯ ಸಹಾಯಕ ನಾರಾಯಣ್, ಆರೋಗ್ಯ ನಿರೀಕ್ಷಕರು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
(ಫೋಟೊ ಇದೆ)