ಶಿವಮೊಗ್ಗ, ಜ21 – ಶ್ರೀ. ಶಿವಕುಮಾರ ಸ್ವಾಮೀಜಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿರುವುದರಿಂದ ಜನವರಿ 23ರಂದು ನಡೆಸಲು ಉದ್ದೇಶಿಸಿದ್ದ ಸಹ್ಯಾದ್ರಿ ಉತ್ಸವದ ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದ್ದು, ಜನವರಿ 24ರಂದು ನೆರವೇರಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಹ್ಯಾದ್ರಿ ಉತ್ಸವ ಆಚರಣೆಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಈಗಾಗಲೇ ಹೊರ ರಾಜ್ಯಗಳ 200ಕ್ಕೂ ಅಧಿಕ ಕಲಾವಿದರು ನಗರಕ್ಕೆ ಆಗಮಿಸಿದ್ದಾರೆ. ವೇದಿಕೆ ನಿರ್ಮಾಣ, ವಸ್ತು ಪ್ರದರ್ಶನ ಮಳಿಗೆಗಳು, ಅಮ್ಯೂಸ್ಮೆಂಟ್ ಪಾರ್ಕ್ ಸಿದ್ಧತೆ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ.
ಶೋಕಾಚರಣೆ ಹಿನ್ನೆಲೆಯಲ್ಲಿ ಜನವರಿ 23ರಂದು ನಡೆಸಲು ಉದ್ದೇಶಿಸಲಾಗಿದ್ದ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ ಉದ್ಘಾಟನೆ, ವಸ್ತು ಪ್ರದರ್ಶನ ಉದ್ಘಾಟನೆ, ಮೆರವಣಿಗೆ ಕಾರ್ಯಕ್ರಮಗಳನ್ನು ಜನವರಿ 24ಕ್ಕೆ ಮರು ನಿಗದಿಪಡಿಸಲಾಗಿದೆ. ಜನವರಿ 24ರಿಂದ 27ರವರೆಗೆ ಇನ್ನುಳಿದ ಕಾರ್ಯಕ್ರಮಗಳು ಪೂರ್ವನಿಗದಿಯಂತೆ ನಡೆಯಲಿವೆ. ಜ.24ರಂದು ಮಧ್ಯಾಹ್ನ 2.30ಗಂಟೆಗೆ ಮೆರವಣಿಗೆ ಹಾಗೂ ಸಂಜೆ ಹಳೆ ಜೈಲು ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅನುದಾನವನ್ನು ಬಳಸಿಕೊಂಡು ಜಿಲ್ಲಾಡಳಿತ ವ್ಯವಸ್ಥಿತವಾಗಿ ಉತ್ಸವ ಆಯೋಜನೆ ಮಾಡುತ್ತಿದೆ. ಹಣಕಾಸು ಕ್ರೋಢೀಕರಿಸಲು ಯಾವುದೇ ಇಲಾಖೆಗಳಿಗೆ ಒತ್ತಡ ಹೇರಿಲ್ಲ. ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಸಂಯೋಜನೆಗೊಳಿಸಿ ಉತ್ಸವದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ಆರೋಗ್ಯ ಕರ್ನಾಟಕ ಯೋಜನೆ ಅಡಿ ಉಚಿತ ಚಿಕಿತ್ಸೆ ಒದಗಿಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಬಾರದಿರುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತದ ವತಿಯಿಂದ ಭರಿಸಲಾಗುವುದು ಎಂದು ಈಗಾಗಲೇ ಆಸ್ಪತ್ರೆಗೆ ತಿಳಿಸಲಾಗಿದ್ದು, ಉಡುಪಿ ಜಿಲ್ಲಾಡಳಿತದ ಜತೆ ಸಮನ್ವಯ ಸಾಧಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟೀಕರಣ ನೀಡಿದರು.