ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಸಾಮಾನ್ಯರು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ಶಿವಮೊಗ್ಗ ಮಹಾನಗರಪಾಲಿಕೆ ಮಹಾಪೌರರಾದ ಶ್ರೀ. ಶಿವಕುಮಾರ್ .ಎಸ್ ಹೇಳಿದ್ದಾರೆ.
ನಗರದ ಕಮಲಾ ನೆಹರು ರಾಷ್ಟ್ರೀಯ ಸ್ಮಾರಕ ಮಹಿಳಾ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ ವತಿಯಿಂದ ಆಯೋಜಿಸಲಾದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕೇಂದ್ರ ಸರ್ಕಾರದ ಎಂಟು ವರ್ಷಗಳ ಸಾಧನೆ ಕುರಿತ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸಂವಹನ ಇಲಾಖೆ ತನ್ನ ಜಾಗೃತಿ ಅಭಿಯಾನಗಳ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಗ್ರಾಮೀಣ ಜನರಿಗೆ ನೀಡುತ್ತಿರುವುದು ಶ್ಲಾಘನೀಯ. ಇಂದಿನ ಯುವಸಮುದಾಯ ಮೊಬೈಲ್ ಗೀಳಿನಿಂದ ಹೊರಬಂದು ಶಿಕ್ಷಣದೆಡೆ ಗಮನ ಹರಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಅದನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಹಕರಿಸಬೇಕೆಂದು ಅವರು ಕರೆ ನೀಡಿದರು.
ಶ್ರೀ. ನಾಗರಾಜು.ಎಸ್.ಎನ್, ಕಾರ್ಯದರ್ಶಿ , ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಶಿವಮೊಗ್ಗ ಮಾತನಾಡಿ, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಗ್ರಾಮೀಣ ಭಾಗಗಳ ಜನರಿಗೆ ತಲುಪಿಸುವ ಅಗತ್ಯವಿದ್ದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಕ್ಷೇತ್ರ ಪ್ರಚಾರ ಅಧಿಕಾರಿ ಶ್ರೀಮತಿ ಅಕ್ಷತಾ ಪ್ರಸ್ತಾವಿಕವಾಗಿ ಮಾತನಾಡಿ, ಛಾಯಾಚಿತ್ರ ಪ್ರದರ್ಶನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಸರ್ಕಾರದ ಎಂಟು ವರ್ಷಗಳ ಸಾಧನೆ ಕುರಿತ ಮಾಹಿತಿ ನೀಡಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆಯಬೇಕು ಎಂದರು.
ಪ್ರೊ. ಸತ್ಯನಾರಾಯಣ, ಆಜೀವ ಸದಸ್ಯರು, ಆಲ್ ಇಂಡಿಯಾ ಎಕನಾಮಿಕ್ ಅಸೋಸಿಯೇಶನ್ ಮಾತನಾಡಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಎಸ್ ನಾಗಭೂಷಣ, ಐ.ಕ್ಯೂ.ಎ.ಸಿ ಸಂಯೋಜಕಿ ಶ್ರೀಮತಿ. ಮಮತಾ ಪಿ.ಆರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಶ್ರೀ. ಸಿ.ವಿಒ ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು.
ಛಾಯಾಚಿತ್ರ ಪ್ರದರ್ಶನ ಮೂರು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾಲೇಜು ಆವರಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ತೆರೆದಿರುತ್ತದೆ.