ಶಿವಮೊಗ್ಗ, ಏಪ್ರಿಲ್ 14 : ಜಗತ್ತಿನ ಸಂವಿಧಾನಗಳೆಲ್ಲವನ್ನೂ ತಳಸ್ಪರ್ಷಿಯಾಗಿ ಅಧ್ಯಯನ ಮಾಡಿ ಭಾರತದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಪವಿತ್ರ ಸಂವಿಧಾನವನ್ನು ರಚಿಸಿಕೊಟ್ಟ ಮಹಾನ್ ಸಾಂವಿಧಾನಿಕ ತಜ್ಞ ಅಂಬೇಢ್ಕರ್ರವರಾಗಿದ್ದರು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿಗಮ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಢ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಭಾರತ ರತ್ನ ಬಿ.ಆರ್.ಅಂಬೇಡ್ಕರ್ರ 128ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದ ತಳ ಸಮುದಾಯದ ಸ್ಫೂರ್ತಿಯ ಸೆಲೆ, ನೊಂದವರ ಎದೆಯಾಳದ ಆತ್ಮಸ್ಥೈರ್ಯದ ಹಾಡು, ಧಮನಿತ ಸಮುದಾಯದ ಚೈತನ್ಯಶಕ್ತಿಯಾಗಿದ್ದರು ಅಂಬೇಡ್ಕರ್ ಎಂದವರು ನುಡಿದರು.
ಈ ದೇಶ ಕಂಡ ಅಪ್ರತಿಮ ಪ್ರಗತಿಪರ ಚಿಂತಕ, ಸಮಾಜ ಸುಧಾರಕ, ಪ್ರಜಾತಂತ್ರ ಪ್ರೇಮಿ, ಲೇಖಕ, ಸಾಮಾಜಿಕ ನ್ಯಾಯ ಪ್ರತಿಪಾದಕ ಅಂತೆಯೇ ಮಾನವತಾವಾದಿಯಾಗಿದ್ದ ಅಂಬೇಡ್ಕರ್ರವರು ಸೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮಾಡಿದ ಸಾಧನೆ ಅನನ್ಯವಾದುದು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರೀತಿಸುವ, ಸಮಾನತೆ ಮತ್ತು ಮಾನವೀಯತೆಯನ್ನು ಗೌರವಿಸುವ ಎಲ್ಲರಿಗೂ ಆದರ್ಶವಾದುದು ಎಂದವರು ನುಡಿದರು.
ಚುನಾವಣೆಯ ಅಪರೂಪದ ಪರಿಕಲ್ಪನೆಯ ಉಗಮಕ್ಕೆ ಕಾರಣರಾದವರು ಅಂಬೇಡ್ಕರ್. ನಾವೆಲ್ಲರೂ ಮಂದಿರ ಮಸೀದಿ ಚರ್ಚು, ಗುರುದ್ವಾರಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಇದು ಚುನಾವಣೆಯ ಕಾಲವಾದ್ದರಿಂದ ಎಲ್ಲರೂ ಇದನ್ನು ಹಬ್ಬದಂತೆ ಸಂಭ್ರಮಿಸಬೇಕು. ನಮಗೆ ಸಂವಿಧಾನವೇ ದೇವರು ಎಂದುಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆ ನಿಂತಿರುವುದೇ ಚುನಾವಣೆಗಳ ಆಧಾರದ ಮೇಲೆ ಎಂದ ಅವರು ಸಂವಿಧಾನದ ಆಶಯ ಈಡೇರಲು ಚುನಾವಣೆಗಳು ನಡೆಯಬೇಕು. ಚುನಾವಣೆ ನಾವು ಚಲಾಯಿಸುವ ಮತದಾನದ ಮೇಲೆ ನಿಂತಿದೆ ಎಂದವರು ನುಡಿದರು.
ಅನೇಕ ದಶಕಗಳ ನಂತರವೂ ಪೂರ್ಣ ಪ್ರಮಾಣದಲ್ಲಿ ಅಂಬೇಡ್ಕರ್ರವರನ್ನು ಅರ್ಥೈಸಿಕೊಳ್ಳುವುದು ಸಾಧ್ಯವಾಗಿಲ್ಲ ಎಂದ ಅವರು, ಅನೇಕ ರೀತಿಯ ಜೀವನಾನುಭವ ಹೊಂದಿದ ಅಗ್ರಗಣ್ಯರಲ್ಲಿ ಒಬ್ಬರು. ಅವರ ಚಿಂತನೆ, ಆಲೋಚನೆಗಳು ಸಾರ್ವಕಾಲಿಕವಾದುವುದ ಎಂದವರು ನುಡಿದರು.
ಅಂಬೇಡ್ಕರ್ ಮತ್ತು ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಅನುಸರಿಸಿದ ಮಾರ್ಗ ಬೇರೆ-ಬೇರೆಯೇ ಆಗಿದ್ದರೂ ಉದ್ದೇಶ ಮಾತ್ರ ಒಂದಾಗಿತ್ತು. ವರ್ಣ ವ್ಯವಸ್ಥೆಯ ವಿಚಾರಗಳು ಇಂದಿನ ಸಮಾಜದಲ್ಲಿ ಜೀವಂತವಾಗಿರುವುದು ಬೇಸರದ ಸಂಗತಿ ಎಂದ ಅವರು ಶೋಷಿತರು ಆರ್ಥಿಕವಾಗಿ ಬಲಿಷ್ಟರಾಗಬೇಕು. ಸಮಾಜದಲ್ಲಿ ಗುರುತಿಸುವ ಸ್ಥಾನಮಾನ ಹೊಂದಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತೀರ್ಥಹಳ್ಳಿ ಸ.ಪ್ರ.ದ.ಕಾಲೇಜಿನ ಉಪನ್ಯಾಸಕ ಶಿವಾಜಿರಾವ್ ಘೋರ್ಪಡೆ ಅವರು ಅಂಬೇಡ್ಕರ್ರವರ ಜೀವನಾದರ್ಶಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
** ಅಂಬೇಡ್ಕರ್ರವರ 128ನೇ ಜಯಂತಿ ಅಂಗವಾಗಿ ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಕಚೇರಿ ಕಾರ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಅಂತರರಾಷ್ಟ್ರೀಯ ಚದುರಂಗ ಕ್ರೀಡಾಪಟು ಸ್ಟಾನಿ ಜಾರ್ಜ್ ಆಂತೋನಿ ಸೇರಿದಂತೆ ಕಚೇರಿಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.
** ಏಪ್ರಿಲ್ 23ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಚುನಾವಣೆಯ ಅಂಗವಾಗಿ ಜಿಲ್ಲಾಧಿಕಾರಿಗಳು ಜಿಲ್ಲಾ ಸ್ಕೌಟ್ ಮತ್ತು ಸೇವಾದಳ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಬಾಪೂಜಿನಗರ, ಟ್ಯಾಂಕ್ಮೊಹಲ್ಲಾಗಳಲ್ಲಿ ಮತಜಾಗೃತಿ ಜಾಥಾ ನಡೆಸಿ, ಮನೆ-ಮನೆಗೆ ತೆರಳಿ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.