ಶಿವಮೊಗ್ಗ, ಜನವರಿ 25 : ನಮ್ಮನ್ನಾಳುವ ಸಮರ್ಥ ಜನನಾಯಕನನ್ನು ಆಯ್ಕೆ ಮಾಡುವ ಪರಮಾಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ದೇಶದ ಪ್ರತಿಪ್ರಜೆಗೂ ನೀಡಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮತದಾನ ಎನ್ನುವುದು ಪ್ರಜಾಪ್ರಭುತ್ವವಾದಿ ದೇಶದ ಜೀವನಾಡಿಯಿದ್ದಂತೆ. ಪ್ರಜಾಪ್ರಭುತ್ವದ ಅಡಿಪಾಯವೇ ಪ್ರಜೆಗಳು. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ ಎಂದರು.
ಈ ವ್ಯವಸ್ಥೆಯಲ್ಲಿ ಜಾತಿ, ಮತ, ಭಾಷೆ, ಬಣ್ಣಗಳ ಬೇಧ-ಭಾವವಿಲ್ಲದೆ ಎಲ್ಲರಿಗೂ ಮತದಾನ ಮಾಡಲು ಸಂವಿಧಾನಾತ್ಮಕವಾಗಿ ಸಮಾನವಾದ ಹಕ್ಕುಗಳನ್ನು ನೀಡಲಾಗಿದೆ ಎಂದ ಅವರು, ಮತದಾನ ಎಂಬುದು ಕೇವಲ ಹಕ್ಕಲ್ಲ ಅದು ಶಕ್ತಿಯೂ ಹೌದು ಎಂದ ಅವರು, ಅಭ್ಯರ್ಥಿಯ ಗುಣ, ನಡತೆ, ಸ್ವಭಾವ, ವಿದ್ಯಾರ್ಹತೆ, ಸಾಮಾಜಿಕ ಕಳಕಳಿ, ದೇಶಪ್ರೇಮ ಮುಂತಾದ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡುವಂತೆ ಅವರು ತಿಳಿಸಿದರು.
ಹಣ, ಮದ್ಯ, ಸೀರೆ, ಕುಕ್ಕರ್ ಸೇರಿದಂತೆ ಅಭ್ಯರ್ಥಿಗಳ ಆಮಿಷಗಳಿಗೆ ಮತವನ್ನು ಮಾರಿಕೊಳ್ಳದಂತೆ ಯುವ ಮತದಾರರಿಗೆ ತಿಳಿಸಿದ ಅವರು, ಒಬ್ಬ ವ್ಯಕ್ತಿ ತಾನು ಮತದಾನ ಮಾಡುವ ಮೂಲಕ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸುವುದರ ಜೊತೆಗೆ, ತಾನು ಮಾಡುವ ಕೆಲಸಗಳಿಗೆ ಜವಾಬ್ದಾರರನ್ನಾಗಿಸುತ್ತದೆ ಮಾತ್ರವಲ್ಲ ತಮ್ಮ ನಿರೀಕ್ಷೆಗಳಿಗೆ, ತಮ್ಮ ತತ್ತ್ವ ಆದರ್ಶ ಮತ್ತು ದೃಷ್ಟಿಕೋನಗಳಿಗೆ ಗೌರವ ನೀಡುವ ವ್ಯಕ್ತಿಯನ್ನು ಆಯ್ಕೆ ಮಾಡುವ ಹಕ್ಕು ಮತದಾರನಿಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, 18 ತುಂಬಿದ ಯುವಕ-ಯುವತಿಯರೆಲ್ಲರೂ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಿ, ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದವರು ನುಡಿದರು.
ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿ, ಅಸಮರ್ಥರು ವಿಜೇತರಾಗಿ ಆಡಳಿತ ನಡೆಸುವಲ್ಲಿ ವಿಫಲರಾದಲ್ಲಿ ಅವರನ್ನ ಪ್ರಶ್ನಿಸುವ ಮತ್ತು ಕೇಳುವ ನೈತಿಕ ಹಕ್ಕಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಚುನಾವಣೆಯ ಹಬ್ಬದಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಅಲ್ಲದೇ ರಾಷ್ಟೀಯ ಮತದಾರರ ದಿನಾಚರಣೆಯ ಅಂಗವಾಗಿ ಸ್ನಾತಕೋತ್ತರ ಪದವಿ, ಪದವಿ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ., ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಂ.ವಟಾರೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ.ವೀರಭದ್ರಯ್ಯ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜ ಕಾಗಲ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್, ಚುನಾವಣಾ ಶಾಖೆಯ ತಹಶೀಲ್ದಾರ್ ಎಂ. ನಾಗರಾಜ್ ಸೇರಿದಂತೆ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಕಾರ್ಯಾಲಯದ ಸಿಬ್ಬಂಧಿಗಳು ಹಾಗೂ ಮಹಾನಗರಪಾಲಿಕೆ ಅಧಿಕಾರಿ ಸಿಬ್ಬಂಧಿಗಳು, ಯುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.