ಶಿವಮೊಗ್ಗ. ಜೂನ್ 02 : : ಜಗತ್ತಿನಾದ್ಯಂತ ವ್ಯಾಪಕವಾಗಿ ಪಸರಿಸುತ್ತಿರುವ ಮಹಾಮಾರಿ ಕೊರೋನ ಸೋಂಕಿನಿಂದ ರಾಜ್ಯದ ಸಫಾಯಿ ಕರ್ಮಚಾರಿಗಳ ಆರೋಗ್ಯ ರಕ್ಷಣೆಗಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಹಾಗೂ ಜಿಲ್ಲಾಡಳಿತದಿಂದ ಅಗತ್ಯ ಪರಿಕರಗಳನ್ನು ಖರೀದಿಸಿ ವಿತರಿಸುವಂತೆ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ರಾಜ್ಯ ಅಧ್ಯಕ್ಷ ಎಂ.ಶಿವಣ್ಣ ಅವರು ಹೇಳಿದರು.
ಈ ಸಂಬಂಧ ಅವರು ಇಂದು ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿಯೂ ಈಗಾಗಲೇ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ ಅಲ್ಲದೇ ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದವರು ನುಡಿದರು.
ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಬೆಳಗಿನ ಉಪಹಾರ ಗುಣಮಟ್ಟದ್ದಾಗಿರಬೇಕು ಎಂದು ತಿಳಿಸಿದ ಅವರು ಬೆಳಗಿನ ಉಪಹಾರಕ್ಕಾಗಿ ನೀಡಲಾಗುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ 500ಜನರಿಗೆ ಓರ್ವರಂತೆ ಪೌರಕಾರ್ಮಿಕರನ್ನು ನೇಮಿಸುವ ಅಗತ್ಯವಿದೆ. ಈ ನಿಯಮದ ಪ್ರಕಾರ ನೇಮಕಾತಿಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪಾಲಿಕೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಪರಿಗಣಿಸುವಂತೆಯೂ ಕ್ರಮ ವಹಿಸಲಾಗುವುದು ಎಂದರು.
2013ರಲ್ಲಿಯೇ ಮ್ಯಾನುವೆಲ್ ಸ್ಕಾವೆಂಜರ್‍ಗಳನ್ನು ಬಳಸಿಕೊಳ್ಳದಿರುವಂತೆ ಕಾಯ್ದೆ ಜಾರಿಯಲ್ಲಿದ್ದರೂ ಈ ಪದ್ಧತಿ ಇನ್ನೂ ಜೀವಂತವಿರುವುದು ಸಾಮಾಜಿಕ ದುರಂತ. ರಾಜ್ಯದಲ್ಲಿ ಇಂತಹ 5000ಕ್ಕೂ ಹೆಚ್ಚಿನ ಸ್ಕಾವೆಂಜರ್‍ಗಳನ್ನು ಗುರುತಿಸಲಾಗಿದ್ದು, ಅವರನ್ನು ಗುರುತಿಸಿ, ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವುದುರ ಜೊತೆಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಮತ್ತು ಖಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಸಮಾನವಾಗಿ ಪರಿಗಣಿಸಿ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕ್ರಮ ವಹಿಸಲಾಗುವುದು ಎಂದ ಅವರು ಇತ್ತೀಚೆಗೆ ಭದ್ರಾವತಿಯಲ್ಲಿ ಕೊಲೆಗೀಡಾದ ಪೌರ ಕಾರ್ಮಿಕರ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳಲಾಗಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಈಗಾಗಲೇ ಮೊದಲ ಕಂತಿನ 4ಲಕ್ಷ ರೂ.ಗಳ ಪರಿಹಾರ ಧನವನ್ನು ನೀಡಲಾಗಿದೆ. ಉಳಿದ 2ನೇ ಕಂತಿನ 4ಲಕ್ಷ ರೂ.ಗಳನ್ನು ಶೀಘ್ರದಲ್ಲಿಯೆ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಅಂತೆಯೇ ಪೌರ ಸಂಸ್ಥೆಯಿಂದ ಮಾಡಿಸಲಾದ ಗುಂಪು ವಿಮೆಯಿಂದ ಸುಮಾರು 2ಲಕ್ಷ ರೂ.ಗಳ ಪರಿಹಾರ ಧನ ದೊರೆಯಬೇಕಾಗಿತ್ತು. ಆದರೆ ಅಲ್ಲಿನ ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗುಂಪು ವಿಮೆ ಯಾಗದಿರುವುದರಿಂದ ಪರಿಹಾರ ಧನ ದೊರೆಯದಾಗಿದೆ. ಕರ್ತವ್ಯದಲ್ಲಿ ಲೋಪವೆಸಗಿರುವ ಹಾಗೂ ಅರ್ಹರಿಗೆ ಸೌಲಭ್ಯ ದೊರಕಿಸಿಕೊಡುವಲ್ಲಿ ಆಗಿರಬಹುದಾದ ಪ್ರಮಾದಕ್ಕೆ ಸಂಬಂಧಿತ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಉಪಮೇಯರ್ ಕೆ.ಶಂಕರ್, ದೀರರಾಜ್, ಆಯೋಗದ ಕಾರ್ಯದರ್ಶಿ ಆರ್.ರಮಾ ಹಾಗೂ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮುಂತಾದವರು ಉಪಸ್ಥಿತರಿದ್ದರು.

error: Content is protected !!