ಮಲೆನಾಡಿನಲ್ಲಿ ಮಳೆಗೆ ನೀರಿನಲ್ಲಿಯೇ ದಾಟಬೇಕು. ಅದರಲ್ಲಿಯೂ ಶರಾವತಿ ಕಣಿವೆ ಪ್ರದೇಶದ ಜನರು ನೀರಿನಲ್ಲಿರುವ ಮರಗಳ ಮೇಲೆ ಬೊಂಬುಗಳನ್ನು ಸಾರವನ್ನಾಗಿ ಮಾಡಿಕೊಂಡು ಒಂದು ದಡದಿಂದ ಮತ್ತೊಂದು ದಡಕ್ಕೆ ದಾಟುವ ಉದಾಹರಣೆಗಳೂ ಇಂದಿಗೂ ಇವೆ. ಸಾಗರ ತಾಲ್ಲೂಕಿನ ಬಚ್ಚೋಡಿಯಲ್ಲಿಯೂ ಬಹಳ ವರ್ಷಗಳ ಕಾಲ ಇದೇ ಪರಿಸ್ಥಿತಿ ಇತ್ತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ‘ಶಾಲಾ ಸೇತುಬಂಧ ಯೋಜನೆ’ ಲೋಕೋಪಯೋಗಿ ಇಲಾಖೆಯಿಂದ ಆರಂಭವಾಯಿತು. ಈಗ ಅದು ಮಲೆನಾಡಿಗರಿಗೆ ವರದಾನವಾಗಿದೆ. 

ವಿಶೇಷ ಪ್ರಯತ್ನ
ತೀರ್ಥಹಳ್ಳಿಯಲ್ಲಿ ಸಂಕ ದಾಟಲು ಹೋಗಿ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ್ದಳು. ಆಗ ಶಾಸಕರಾಗಿ ಈಗ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹಾಲಪ್ಪ ಮಲೆನಾಡಿನ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಡಿಸಿ ಸದನದ ಗಮನ ಸೆಳೆದಿದ್ದರು. ಈ ಯೋಜನೆ ಅತ್ಯಂತ ವ್ಯವಸ್ಥಿತವಾಗಿ ಜಿಲ್ಲೆಯಲ್ಲಿ ಮುನ್ನಡೆಸಲು ಸರ್ಕಾರ ವಿಶೇಷವಾಗಿ ಅನುದಾನ ಬಿಡುಗಡೆ ಮಾಡಿತ್ತು. ಆ ನಿಟ್ಟಿನಲ್ಲಿ ಆಗ ಸುಮಾರು 26 ಕಾಮಗಾರಿಗಳನ್ನು ಸಾಗರ ತಾಲ್ಲೂಕಿನಲ್ಲಿ ಕೈಗೊಳ್ಳಲಾಯಿತು. ಸುಮಾರು 5ಕೋಟಿ 19ಲಕ್ಷ ವೆಚ್ಚದಲ್ಲಿ ದಿಗಟೇಕೊಪ್ಪ, ಕಂಜಿಗೆ ಗದ್ದೆ, ಸಂಕಬಾಗಿಲು, ಹೊಸಗುಂದ, ಬಾಲನಗದ್ದೆ, ಹೊಸೂರು, ಕಟ್ಟಿನಕಾರು, ಕಾಗೆಹಳ್ಳ, ಬಚ್ಚೋಡಿ ಮುಂತಾದ ದುರ್ಗಮ ಪ್ರದೇಶಗಳಲ್ಲಿ ಕಿರುಸೇತುವೆಗಳನ್ನು ನಿರ್ಮಾಣ ಮಾಡಲಾಯಿತು. ಸಾಕಷ್ಟು ಜನ ವನವಾಸಿಗಳಿಗೆ ಇದರಿಂದ ಉಪಯೋಗವಾಯಿತು. ಈ ವರ್ಷದ ಮಳೆಗಾಲದಲ್ಲಂತೂ ಗ್ರಾಮೀಣ ಜನರಿಗೆ ಓಡಾಡಲು ಈ ಕಿರುಸೇತುವೆಗಳು ಸಂಪರ್ಕಸಾಧನವಾಗಿ ಮಾರ್ಪಾಡಾದವು.
ಮುಂದುವರಿದ ಯೋಜನೆ
ರಾಜ್ಯದ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಈ ಯೋಜನೆಯನ್ನು ಮುಂದುವರಿಸಿತು. ಈ ವರ್ಷವೂ 86.06 ಕೋಟಿ ವೆಚ್ಚದಲ್ಲಿ ಸುಮಾರು 257 ಕಾಮಗಾರಿಗಳಿಗೆ ಸಾಗರ ಮತ್ತು ಹೊಸನಗರ ತಾಲ್ಲೂಕಿನಲ್ಲಿ ಪ್ರಸ್ತಾವನೆ ಕಳುಹಿಸಲಾಗಿದೆ. ಅದರಲ್ಲಿ ತೀರಾ ಸಂಕಷ್ಟದಲ್ಲಿರುವ ಪ್ರದೇಶಗಳನ್ನು ಗುರುತಿಸಿ ಅವರಿಗೆ ಸಂಪರ್ಕ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ರೂಪಿತಗೊಂಡಿರುವ ಕಿರುಸೇತುವೆಗಳಲ್ಲಿ ಬಹಳ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ದಿಗಟೇಕೊಪ್ಪದ 12ಮೀಟರ್ ಉದ್ದದ ಕಿರುಸೇತುವೆ ಶಾಲಾ ಮಕ್ಕಳು ನೀರನ್ನು ದಾಟಿ ಹೋಗಬೇಕಾದ ಪರಿಸ್ಥಿತಿಯನ್ನು ತಪ್ಪಿಸಿ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಆರಂಭದಲ್ಲಿ ಈ ಯೋಜನೆಯನ್ನು ಸಾಗರ, ತೀರ್ಥಹಳ್ಳಿ, ಸೊರಬ, ಹೊಸನಗರಕ್ಕೆ ರೂಪಿಸಲಾಗಿತ್ತು. ಈ ಸಮಸ್ಯೆಯನ್ನು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಕ್ಷೇತ್ರಗಳಲ್ಲಿಯೂ ಮುಂದುವರಿದಿದೆ ಎಂದಾಗ ಯೋಜನೆ ಕರಾವಳಿಗೂ ವಿಸ್ತರಿಸಲಾಯಿತು.

ಜಗದೀಶಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸಾಗರ : ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಲಾ ಸಂಪರ್ಕ ಸೇತು ಯೋಜನೆ ಅಡಿ ಕಳೆದ ವರ್ಷ 26 ಕಾಲುಸಂಕಗಳನ್ನು ನಿರ್ಮಿಸಲಾಗಿದ್ದು ಈ ಬಾರಿ 257 ಕಾಲುಸಂಕಗಳಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಅದರಲ್ಲಿಯೂ ಅತ್ಯಂತ ದುರ್ಗಮವಾದ ಕಾನೂರು ಗ್ರಾಮದ ಕಲಿಗಲಿ ಮತ್ತು ತಗ್ತಿ ರಸ್ತೆ ಮತ್ತು ಸಂಪರ್ಕದ ರಸ್ತೆ ಬಗ್ಗೆ ಮಾಹಿತಿ ಪಡೆದಿದ್ದು ಇಲಾಖೆಯ ಗಮನಕ್ಕೂ ತರಲಾಗಿದೆ.

ಹಾಲಪ್ಪ ಹರತಾಳು, ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ: ಕಳೆದ ಸಾಲಿನಲ್ಲಿ ಶಾಲಾ ಸಂಪರ್ಕ ಸೇತು ಯೋಜನೆ ಮಲೆನಾಡಿಗೆ ಬಹಳ ಅನುಕೂಲವಾಗಿದೆ. ಇತ್ತೀಚೆಗೆ ಬಿದ್ದ ಮಳೆಯಲ್ಲಿ ಸಂಪರ್ಕ ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಈ ಸೇತುವೆ ಜನತೆಗೆ ವರದಾನವಾಯಿತು. ಮತ್ತೆ ಎಲ್ಲೆಲ್ಲಿ ಕಿರುಸೇತುವೆಗಳ ಅವಶ್ಯಕತೆ ಇದೆಯೋ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಶೀಘ್ರ ಅದು ಅನುಮೋದನೆಯಾಗಲಿದೆ.
-ಈಶ್ವರ ಭಟ್, ಅರ್ಚಕರು, ಬಚ್ಚೋಡಿ: ನಾನು ಬಚ್ಚೋಡಿ ಗ್ರಾಮದ ಈಶ್ವರ ದೇವಸ್ಥಾನದ ಅರ್ಚಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ದೇವರ ಪೂಜೆ ಮಾಡಲು ಮತ್ತು ರಸ್ತೆಯನ್ನು ತಲುಪಲು ಮರದ ಮೇಲೆ ಬೊಂಬುಗಳನ್ನು ಹಾಕಿ ಸಂಕ ಮಾಡಿಕೊಂಡಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ನಮಗೆ ಒಂದು ಉಪಯುಕ್ತ ಯೋಜನೆಯ ಮೂಲಕ ಕಿರುಸೇತುವೆಯನ್ನು ನಿರ್ಮಿಸಿಕೊಟ್ಟು ಇಲ್ಲಿಯ ಜನರಿಗೆ ಮಹದುಪಕಾರ ಮಾಡಿದೆ.

error: Content is protected !!