ಶಿವಮೊಗ್ಗ, ಜನವರಿ 27 : ಬೀದಿಬೀದಿ ನಾಯಿಗಳನ್ನು ಕ್ರೂರವಾಗಿ ಕೊಲ್ಲುವುದು ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ-2001 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕಿ ಬಿಡಲು ಪಾಲಿಕೆ ವತಿಯಿಂದ ಜನವರಿ25 ರಿಂದ ಮಾರ್ಚ್ 25 ರವರೆಗೆ ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಕ್ತಿ ಮತ್ತು ರೇಬಿಸ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾನವೀಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ಶ್ವಾನಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು, ಪ್ರಾಣಿಜನ್ಯ ರೋಗಗಳಾದ ರೇಬಿಸ್, ಲೆಪ್ಟೋಸ್ಟೈರಾ ಇತ್ಯಾದಿ ರೋಗಗಳಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವುದು ಹಾಗೂ ಬೀದಿ ನಾಯಿಗಳಿಂದ ಸಾರ್ವಜನಿಕರಿಗಾಗುವ ತೊಂದರೆಗಳಿಂದ ಮುಕ್ತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಈ ಕಾರ್ಯಕ್ರಮದಲ್ಲಿ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ ರೇಬಿಸ್ ವಿರುದ್ದ ಲಸಿಕೆ ಹಾಕಿ ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಪೂರ್ಣವಾದ ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲಿಯೇ ಬಿಡಲಾಗುವುದು. ಶಸ್ತ್ರಚಿಕಿತ್ಸೆಯನ್ನು ಮಹಾವೀರ್ ಗೋಶಾಲೆ ಪಕ್ಕ, ರಾಜೀವ್ ಗಾಂಧಿ ಬಡಾವಣೆ ಇಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹಾನಗರಪಾಲಿಕೆ ಪಶು ವೈದ್ಯಾಧಿಕಾರಿ
ಡಾ. ರೇಖಾ.ಎಸ್.ಟಿ, ಮೊ.ಸಂ: 9886326268 ನ್ನು ಸಂಪರ್ಕಿಸಬಹುದೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.