ಶಿವಮೊಗ್ಗ ಜಿಲ್ಲೆಯಲ್ಲಿ 5,460 ಹೆಕ್ಟೇರ್ ಶುಂಠಿ ಬಿಳೆಯನ್ನು ಅಡಿಕೆಯ ಅಂತರ ಬೆಳೆಯಾಗಿ ಮತ್ತು ಏಕಬೆಳೆಯಾಗಿ ಬೆಳೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಂಠಿಯಲ್ಲಿ ಬೆಳೆಗೆ ಗಡ್ಡೆಕೊಳೆ ರೋಗವು ಕಂಡುಬಂದಿರುತ್ತದೆ. ಶುಂಠಿ ಗಡ್ಡೆ ಕೊಳೆರೋಗವು ಪೈಥಿಯಂ ಆಫಿನಿಡರಮೆಟ ಎಂಬ ಶಿಲೀಂಧ್ರದಿಂದ ಬರುತ್ತದೆ, ಬೆಳೆಯು ಈ ರೋಗಕ್ಕೆ ತುತ್ತದಾಲ್ಲಿ ಗಿಡ ಸಂಪೂರ್ಣವಾಗಿ ಒಣಗಿ ಸಾಯುವುದರಿಂದ ಅಧಿಕ ಬೆಳೆಯ ನಷ್ಟವನ್ನುಂಟುಮಾಡುತ್ತದೆ. ಈ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಹೆಚ್ಚು, ರೋಗದ ಸಮಗ್ರ ನಿರ್ವಹಣೆ ಅತಿ ಅವಶ್ಯವಾಗಿರುತ್ತದೆ, ಜಿಲ್ಲೆಯಲ್ಲಿ ಈಗಾಗಲೇ ಬೆಳೆಯು ಬಿತ್ತನೆಯಾಗಿದ್ದು, ಕೆಲವು ಕಡೆ ಗಡ್ಡೆಕೊಳೆ ರೋಗಕ್ಕೆ ತುತ್ತಾಗಿರುವುದು ತೊಟಗಾರಿಕೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಶುಂಠಿ ಬೆಳೆ ಬೆಳೆಯುತ್ತಿರುವಂತಹ ರೈತರುಗಳು ರೊಗದ ಸಮಗ್ರ ನಿಯಂತ್ರಣಕ್ಕೆ, ಇಲಾಖೆಯ ನೀಡಿರುವ ನಿರ್ವಹಣಾ ಕ್ರಮಗಳನ್ನು ತಪ್ಪದೇ ಅನುಸರಿಸಲು ತೋಟಗಾರಿಕೆ ಇಲಾಖೆ ಕೋರಿದೆ.
ರೋಗದ ಲಕ್ಷಣಗಳು:
ರೋಗಕ್ಕೆ ತುತ್ತಾದ ಗಿಡಗಳ ಎಲೆಗಳ ತುದಿ ಭಾಗವು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಎಲೆ ಹಳದಿಯಾಗುತ್ತದೆ. ನಂತರ ಗಿಡಗಳು ಒಣಗುತ್ತವೆ. ಗಿಡದ ಬುಡದ ಭಾಗವು ತೇವಾಂಶಯುಕ್ತ ಕಂದುಬಣ್ಣದಿಂದ ಕೂಡಿರುತ್ತದೆ. ನಂತರ ಮೃದುವಾಗಿ ಕೊಳೆಯುತ್ತದೆ.
ಶುಂಠಿ ಗಡ್ಡೆಕೊಳೆರೋಗದ ಸಮಗ್ರ ಹತೋಟಿ ಕ್ರಮಗಳು:
ಮಡಿಗಳಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ಸರಿಪಡಿಸುವುದು. ಬೆಳೆಯು ನಾಟಿಯಾಗಿರುವ ಪ್ರದೇಶದಲ್ಲಿ ಮಡಿಗಳನ್ನು ಏರಿಸಿ ಬಸಿಗಾಲುವೆಗಳನ್ನು ಸರಿಪಡಿಸುವುದರೊಂದಿಗೆ ಬಿದ್ದಂತಹ ಮಳೆನೀರು ಸರಾಗವಾಗಿ ಬಸಿದು ಹೋಗುವಂತೆ ನೋಡಿಕೊಳ್ಳುವುದು. ತಾಕುಗಳಲ್ಲಿ ರೊಗದ ಮುನ್ಸೂಚನೆ ಕಂಡುಬಂದಲ್ಲಿ ಶೇ. 1 ರ ಬೋರ್ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಈಗಾಗಲೇ ರೋಗಕ್ಕೆ ತುತ್ತಾಗಿರುವ ತಾಕುಗಳಲ್ಲಿ ಭಾದಿತ ಗಿಡಗಳನ್ನು ಗಡ್ಡೆಗಳ ಸಮೇತ ತೆಗೆದು ಹಾಕಿ, ನಂತರ ಮೆಟಲಾಕ್ಸಿಲ್ ಒZ + ಮ್ಯಾಂಕೊಜೆಬ್( ರೆಡೊಮಿಲ್ ಒZ) ಅಥವಾ ಸೈಮಾಕ್ಸಿನ್+ ಮ್ಯಾಂಕೊಜೆಬ್( ಕರ್ಜಟ್ – ಎಂ8) ಯುಕ್ತ ರೋಗನಾಶಕಗಳನ್ನು 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ದ್ರಾವಣವನ್ನು ರೋಗ ಬಂದಂತಹ ಮಡಿಗೆ ಹಾಗೂ ಸುತ್ತಮುತ್ತಲಿನ ಮಡಿಗಳಿಗೆ ಸಂಪೂರ್ಣವಾಗಿ ನೆನೆಯುವಂತೆ ಹಾಕುವುದು ಹಾಗೂ ಸಂಪೂರ್ಣ ಬೆಳೆಗೆ ಸಿಂಪರಣೆ ಮಡುವುದು.
ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ವಾರಾಂತ್ಯದವರೆಗೂ ಮಳೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ತೋಟಗಳಲ್ಲಿ ಬಸಿಗಾಲುವೆಗಳನ್ನು ಸರಿಪಡಿಸುವುದರೊಂದಿಗೆ ಬಿದ್ದಂತಹ ಮಳೆನೀರು ನಿಲ್ಲದಂತೆ ನೋಡಿಕೊಳ್ಳಲು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
(ಛಾಯಾಚಿತ್ರ ಲಗತ್ತಿಸಿದೆ)