ಯಾವುದೇ ಕ್ಷೇತ್ರದಲ್ಲಾಗಲೀ, ವ್ಯವಸ್ಥೆಯಲ್ಲಾಗಲೀ ನಿರಂತರವಾಗಿ ಬದಲಾವಣೆಗಳಾಗುತ್ತಿದ್ದರೆ ಅದನ್ನು ಅಭಿವೃದ್ಧಿಯ ಮೆಟ್ಟಿಲುಗಳೆಂದು ಹೇಳಬಹುದು. ಹೀಗೇ ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೂ ಅದರಲ್ಲಿ ದೃಢ ನಿರ್ಧಾರಗಳು ಮುಖ್ಯ. ಯಾವುದೇ ವ್ಯವಸ್ಥೆಯನ್ನು ಅರ್ಥಬದ್ಧವಾಗಿ ಮತ್ತು ಅಭಿವೃದ್ಧಿಗೆ ಪೂರಕವಾಗಿ ಬದಲಾಯಿಸಬೇಕು ಮತ್ತು ಅದು ಆಯಾ ಕ್ಷೇತ್ರದ ಸಮಸ್ತರಿಗೂ ಅನುಕೂಲವಾಗಬೇಕು ಎಂದರೆ ಅಲ್ಲಿ ಪೂರ್ವ ಪರಿಶೀಲನೆ ಮತ್ತು ಸ್ಥಿರ ಯೋಜನೆಗಳು ಅತ್ಯಗತ್ಯ. ಇವು ಅಭಿವೃದ್ಧಿಗೆ ಪೂರಕ ಅಂಶಗಳು.
ಹೀಗೇ ಹಿಂದಿನಿಂದಲೂ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೊಸತನವನ್ನು ಸೇರಿಸುವ ಮೂಲಕ ಆಧುನಿಕತೆಯನ್ನು ಬರಮಾಡಿಕೊಳ್ಳುವ ಕೆಲಸಗಳು ನಿರಂತರವಾಗಿ ಸಾಗುತ್ತಿದೆ. ಹೀಗೇ ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರದಲ್ಲೂ ಹೊಸತನದ ಚಿಗುರೊಡೆದಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಗಳಲ್ಲಿ ಒಂದಾದ, ದೇಶದಲ್ಲಿ ಆಯ್ದ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ರೂಪಾಂತರಗೊಳಿಸುವ “ಸ್ಮಾರ್ಟ್ ಸಿಟಿ ಯೋಜನೆ” ಯಲ್ಲಿ ಕರ್ನಾಟಕದ ಒಟ್ಟು 11 ನಗರಗಳು ಆಯ್ಕೆಯಾಗಿವೆ. ಶಿವಮೊಗ್ಗ ನಗರವನ್ನು ಸೇರಿದಂತೆ, ಮೈಸೂರು, ಕಲ್ಬುರ್ಗಿ, ವಿಜಯಪುರ, ಬಳ್ಳಾರಿ, ಬೆಂಗಳೂರು, ತುಮಕೂರು, ಮಂಗಳೂರು, ಬೆಳಗಾವಿ, ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು ಈ ಪಟ್ಟಿಯಲ್ಲಿವೆ. ಈ ನಗರಗಳಲ್ಲಿ ಈಗಾಗಲೇ ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
ಈ ಯೋಜನೆಯ ಅನುಷ್ಟಾನ ಮುಖ್ಯಮಂತ್ರಿ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಶರವೇಗದಲ್ಲಿ ಸಾಗುತ್ತಿದೆ. ವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ತರ ಬದಲಾವಣೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಿರುವುದು ಶಿವಮೊಗ್ಗದ ಹೆಗ್ಗಳಿಕೆ.
ಜಿಲ್ಲೆಯ ಆಯ್ದ ಪ್ರಮುಖ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವಲ್ಲಿ ನಮ್ಮ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲದೇ ಸರ್ಕಾರಿ ಶಾಲೆಯ ಮಕ್ಕಳು ಕನ್ನಡ ಮಾಧ್ಯಮಕ್ಕೆ ಮಾತ್ರ ಸೀಮಿತವಾದವರು ಎಂಬ ಹಣೆ ಪಟ್ಟಿಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಈ ಹಿಂದೆಯೇ ಆಂಗ್ಲ ಮಾಧ್ಯಮದಲ್ಲಿಯೂ ಶಿಕ್ಷಣ ನೀಡಲು ಪ್ರಾರಂಭಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ಈ ಬೆಳವಣಿಗೆಯ ಮುಂದಿನ ಭಾಗವೆಂದು ಹೇಳಬಹುದು.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 2021ರಿಂದ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ಗಳನ್ನು ಪ್ರಾರಂಭಿಸಲಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ದುರ್ಗಿಗುಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಈಗಾಗಲೇ ಮಾದರಿಯಾಗಿ ಸ್ಮಾರ್ಟ್ ತರಗತಿಗಳನ್ನು ಪ್ರಾರಂಬಿಸಲಾಗಿದೆ. ಅಂತೆಯೇ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯ ಆಯ್ದ 45 ಸರ್ಕಾರಿ ಶಾಲೆಗಳಲ್ಲಿಯೂ ಸಹ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ತರಗತಿಗಳು ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಒಳಗೊಂಡಿರಲಿವೆ.
ಜಿಲ್ಲೆಯಲ್ಲಿ ಪ್ರಥಮವಾಗಿ ದುರ್ಗಿಗುಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 2020-21ನೇ ಸಾಲಿನಿಂದ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲಾಗಿದೆ. 6ನೇ ತರಗತಿಯಿಂದ 10ನೇ ತರಗತಿ ವರೆಗಿನ ಎಲ್ಲಾ ಮಕ್ಕಳಿಗೆ ಸ್ಮಾರ್ಟ್ ತರಗತಿಗಳನ್ನು ನಡೆಸಲಾಗುತ್ತಿದೆ. ಇಲ್ಲಿ 6 ಮತ್ತು 7ನೇ ತರಗತಿಯಲ್ಲಿ ತಲಾ 200ಕ್ಕೂ ಹೆಚ್ಚು ಮಕ್ಕಳಿದ್ದು, ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಪ್ರತಿ ತರಗತಿಗಳನ್ನು 4 ಸೆಕ್ಷನ್ಗಳಾಗಿ ವಿಂಗಡಿಸಲಾಗಿದೆ. ಅಲ್ಲದೇ, ಇಲ್ಲಿ ಒಟ್ಟು 4 ಐಸಿಟಿ ಲ್ಯಾಬ್ ಗಳಿವೆ.
ಈ ರೀತಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಡೆಸುವ ಸ್ಮಾರ್ಟ್ ತರಗತಿಗಳನ್ನು ಕೆ-ಕ್ಲಾಸ್ ಎಂದು ಕರೆಯಲಾಗುತ್ತದೆ. ಸರ್ಕಾರದ ಪಠ್ಯಕ್ರಮವನ್ನು ಈಗಾಗಲೇ ಡಿಜಿಟಲೀಕರಣಗೊಳಿಸಿ ಶಾಲೆಗೆ ನೀಡಲಾಗಿದೆ. ಇವುಗಳ ಜೊತೆಗೆ ಯೂಟ್ಯೂಬ್ ಹಾಗೂ ಗೂಗಲ್ ಮೂಲಕ ಪಠ್ಯಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತಿದೆ. ಇವುಗಳನ್ನು ಕೆ-ಯಾನ್ ಪ್ರೊಜೆಕ್ಟರ್ ಮೂಲಕ ಸ್ಮಾರ್ಟ್ ಬೋರ್ಡ್ ಮೇಲೆ ಪ್ರದರ್ಶಿಸಲಾಗುತ್ತದೆ. ಹೀಗೆ ಪ್ರದರ್ಶನಗೊಂಡ ಪಠ್ಯಗಳ ಕುರಿತು ಅವಶ್ಯಕತೆ ಇದ್ದಾಗ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸುತ್ತಾರೆ. ಸ್ಮಾರ್ಟ್ ಬೋರ್ಡ್ ಮೇಲೆ ಬರೆಯಲು, ಪಠ್ಯವನ್ನು ಮೇಲೆ ಕೆಳಗೆ ಚಲಿಸುವಂತೆ ಮಾಡಲು ಸ್ಟೈಲಸ್ ಎಂಬ ಪೆನ್ ಅನ್ನು ಬಳಸಲಾಗುತ್ತದೆ. ಸ್ಟೈಲಸ್ ಸಹಾಯದಿಂದ ಕಪ್ಪು ಹಲಗೆಯ ಮೇಲೆ ಬರೆಯುವಂತೆ ಸ್ಮಾರ್ಟ್ ಬೋರ್ಡ್ ಮೇಲೆಯೂ ಬರೆದು ವಿವರಿಸಬಹುದು. ಈ ತಂತ್ರಜ್ಞಾನದ ಬಳಕೆಯ ಕುರಿತು ಶಿಕ್ಷಕರಿಗೆ ಮೂರು ದಿನಗಳ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳ ಹಾಜರಾತಿಯೂ ಈಗ ಡಿಜಿಟಲೀಕರಣಗೊಂಡಿದೆ.
ಸ್ಮಾರ್ಟ್ ತರಗತಿಗಳು ಪ್ರಾರಂಭವಾದ ನಂತರ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ತರಗತಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಸ್ಮಾರ್ಟ್ ತರಗತಿಗಳಿಂದ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸುವುದು ಸುಲಭವಾಗಿದೆ. ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಜ್ಞಾನ ಹೆಚ್ಚಾಗಿದೆ. ಮಕ್ಕಳೇ ಉತ್ಸುಕತೆಯಿಂದ ಪಿಪಿಟಿ ಬಳಸಿ ಒಂದೊಂದು ವಿಷಯದ ಕುರಿತು ವಿವರಿಸುವಷ್ಟು ಕೌಶಲ್ಯ ಪಡೆದಿದ್ದಾರೆ. ಒಟ್ಟಾರೆ ಸ್ಮಾರ್ಟ್ ತರಗತಿಗಳು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿದೆ ಎಂದು ಶಾಲೆಯ ಸಹಾಯಕ ಶಿಕ್ಷಕಿಯಾದ ಉಶಾರಾಣಿ ಅಭಿಪ್ರಾಯಪಡುತ್ತಾರೆ.
ನನಗೆ ಹಿಂದಿನ ತರಗತಿ ಶೈಲಿಗಿಂತ ಸ್ಮಾರ್ಟ್ ತರಗತಿಗಳು ತುಂಬಾ ಇಷ್ಟ. ಇಲ್ಲಿ ಪಾಠದೊಂದಿಗೆ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಹಾಗೂ ಸಣ್ಣ ಕಥೆಗಳು, ಪದ್ಯಗಳ ವೀಡಿಯೋಗಳನ್ನು ನಮಗೆ ತೋರಿಸುತ್ತಾರೆ. ಇದರಿಂದ ವಿಷಯ ನಮಗೆ ಚೆನ್ನಾಗಿ ಅರ್ಥವಾಗುತ್ತೆ ಅನ್ನೋದು ಆರನೇ ತರಗತಿಯ ವಿದ್ಯಾರ್ಥಿನಿ ಮಾನಸಿ ಯ ಅಭಿಪ್ರಾಯ.
ಸ್ಮಾರ್ಟ್ ಸಿಟಿ ಯೋಜನೆಯಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲಾಗಿದೆ. ಯಾವುದೇ ಇಂಟರ್ನ್ಯಾಷನಲ್ ಶಾಲೆಗಳಿಗೂ ಕಡಿಮೆಯಿಲ್ಲದಂತಹ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಶಿಕ್ಷಕರಿಗೆ ನಿರಂತರ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಹೇಳಿದ್ದಾರೆ.
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಜನರ ಎದುರು ಸರ್ಕಾರಿ ಶಾಲೆಗಳು ಇಂದು ಸೆಡ್ಡು ಹೊಡೆದು ನಿಲ್ಲುತ್ತಿವೆ. ಯಾವುದೇ ಖಾಸಗೀ ಶಾಲೆಗೆ ಕಡಿಮೆಯಿಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತಿವೆ. ಉತ್ತಮ ಗುಣಮಟ್ಟದ ಕಟ್ಟಡಗಳು, ಉತ್ತಮ ಬೋಧಕ ವರ್ಗ, ಪಠ್ಯೇತರ ಚಟುವಟಿಕೆಗಳು, ಈಗ ಸ್ಮಾರ್ಟ್ ತರಗತಿಗಳು ಹೀಗೇ ಸರ್ಕಾರಿ ಶಾಲೆಗಳ ಗುಣಮಟ್ಟದ ಮಾನದಂಡಕ್ಕೆ ಹೊಸ ಹೊಸ ಅಂಶಗಳು ಸೇರ್ಪಡೆಯಾಗುತ್ತಿವೆ. ಒಟ್ಟಾರೆಯಾಗಿ ಸ್ಮಾರ್ಟ್ ಕ್ಲಾಸ್ ಗಳು ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಉತ್ತುಂಗಕ್ಕೇರಿಸಿವೆ.
ಸ್ಮಾರ್ಟ್ ಕ್ಲಾಸ್ ಯೋಜನೆ
• ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 45 ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ತರಗತಿಗಳು ಆರಂಭ
• 45 ಶಾಲೆಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಒಟ್ಟಾರೆಯಾಗಿ 92 ಡಿಜಿಟಲ್ ಕ್ಲಾಸ್ ರೂಂ ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ನೀಡಲಾಗಿದ್ದು, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಂಚಿಕೆ
• ಪ್ರತೀ ಸ್ಮಾರ್ಟ್ ತರಗತಿಗಳು ತಲಾ ಒಂದೊಂದು ಡಿಜಿಟಲ್ ಡಿವೈಸ್ ಗಳನ್ನು ಹೊಂದಿರಲಿದ್ದು, ಅದಕ್ಕೆ ಬೇಕಾದಂತಹ ಲ್ಯಾನ್, ಯುಪಿಎಸ್ ಮತ್ತು ವೈ-ಫೈ ಸೌಲಭ್ಯ ನೀಡಲಾಗಿದೆ.
• ಎಲ್ಲಾ 45 ಶಾಲೆಗಳು ಮತ್ತು ಒಂದು ಡಿಡಿಪಿಐ ನಲ್ಲಿತಲಾ ಒಂದೊಂದು ಸ್ಮಾರ್ಟ್ ಲ್ಯಾಬ್ ಇರಲಿದ್ದು, ವಿದ್ಯಾರ್ಥಿಗಳಿಗೆ ಕ್ರೋಮ್ ಬುಕ್ ಗಳು ಲಭ್ಯವಾಗಲಿವೆ. ಮತ್ತು ಇವುಗಳ ಬಳಕೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ವೈ-ಫೈ ಸೌಲಭ್ಯಗಳನ್ನು ನೀಡಲಾಗುತ್ತದೆ.
• ಈ ಯೋಜನೆಯಲ್ಲಿ ಒಟ್ಟು 436 ಲ್ಯಾಪ್ಟಾಪ್ಗಳನ್ನು ಮತ್ತು 46 ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಗಳನ್ನು ನೀಡಲಾಗಿದೆ.
• ಇಲ್ಲಿ ಕಂಪ್ಯೂಟರ್ ಲ್ಯಾಬ್ ಮತ್ತು ಕ್ರೋಮ್ ಬುಕ್ ಗಳನ್ನು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೀಡಲಾಗುತ್ತದೆ.
• 45 ಶಾಲೆಯ ಎಲ್ಲಾ ಶಿಕ್ಷಕರಿಗೂ ಸ್ಮಾರ್ಟ್ ಕ್ಲಾಸ್ ಕುರಿತು 3 ದಿನಗಳ ತರಬೇತಿ ನೀಡಲಾಗಿದೆ.
- ಅಮೃತಾ ಚಂದ್ರಶೇಖರ್
- ವತ್ಸಲಾ ಲೋಕೇಶ್