ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಡಿಜಿಟಲ್ ಪಾವತಿ ವ್ಯವಸ್ಥೆ (ಎಲೆಕ್ಟ್ರಾನಿಕ್ ಡೆಬಿಟ್ ಕಲೆಕ್ಷನ್) ಆರಂಭಿಸಿರುವುದರಿಂದ ಆಸ್ತಿ ತೆರಿಗೆ ಪಾವತಿಯಲ್ಲಿರುವ ಹಲವಾರು ಗೊಂದಲಗಳು ನಿವಾರಣೆಯಾಗಲಿವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಸೋಮವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಎಲೆಕ್ಟ್ರಾನಿಕ್ ಡೆಬಿಟ್ ಕಲೆಕ್ಷನ್ (ಇಡಿಸಿ) ಯಂತ್ರಗಳನ್ನು ಬಿಲ್ ಕಲೆಕ್ಟರ್‍ಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ತಂತ್ರಜ್ಞಾನದ ಬಳಕೆ ಮೂಲಕ ಸಾರ್ವಜನಿಕರು ತೆರಿಗೆಯನ್ನು ಸುಲಭವಾಗಿ ಪಾವತಿಸುವ ವಿಧಾನ ಇದಾಗಿದ್ದು, ರಾಜ್ಯದ ಕೆಲವೇ ಮಹಾನಗರ ಪಾಲಿಕೆಯಲ್ಲಿ ಈ ಸೌಲಭ್ಯ ಲಭ್ಯವಿದೆ. ಇಡಿಸಿ ಸೌಲಭ್ಯದಿಂದಾಗಿ ಆಸ್ತಿ ತೆರಿಗೆ ಸಂಗ್ರಹ ಸುಲಭವಾಗಲಿದ್ದು, ತೆರಿಗೆದಾರರು ತಾವು ಇರುವ ಸ್ಥಳದಲ್ಲಿಯೇ ತೆರಿಗೆಯನ್ನು ಪಾವತಿಸಬಹುದಾಗಿದೆ. ಅವರು ಪಾವತಿಸಿದ ಮೊತ್ತ ಅದೇ ದಿನ ಖಾತೆಗೆ ಜಮಾ ಆಗಲಿದ್ದು, ಪಾಲಿಕೆ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಸಾಧ್ಯವಾಗಲಿದೆ ಎಂದು ಹೇಳಿದರು.
ಹೆಚ್‍ಡಿಎಫ್‍ಸಿ ಬ್ಯಾಂಕ್ ಸಹಯೋಗದೊಂದಿಗೆ ಈ ಕಾರ್ಯಯೋಜನೆ ಜಾರಿಗೆ ತರಲಾಗಿದೆ. ಇನ್ನು ಮುಂದೆ ಬಿಲ್ ಕಲೆಕ್ಟರ್‍ಗಳು ಮನೆಗಳಿಗೆ ಭೇಟಿ ನೀಡಿ ಈ ಡಿಜಿಟಲ್ ಯಂತ್ರದ ಸಹಾಯದಿಂದ ಡಿಡಿ, ಚೆಕ್ ಅಥವಾ ಎಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಆಸ್ತಿ ತೆರಿಗೆಯನ್ನು ಪಡೆಯಲು ಸಾಧ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಕಾರ್ಯವಿಧಾನ: ಇಡಿಸಿ ಆಂಡ್ರಾಯಿಡ್ ಆಧಾರಿತ ಯಂತ್ರವಾಗಿದ್ದು, ಆಸ್ತಿ ಐಡಿ ಆಧಾರದಲ್ಲಿ ಡಿಮಾಂಡ್ ನೋಟ್ ಇದರಲ್ಲಿ ಸಿದ್ಧಪಡಿಸಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಆಯುಕ್ತರು ತೆರಿಗೆ ಸಂಗ್ರಹದ ರಿಯಲ್ ಟೈಮ್ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆರೋಗ್ಯ ಇನ್ಸ್‍ಪೆಕ್ಟರ್‍ಗಳಿಗೆ ನೀಡಲಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ, ನೈರ್ಮಲ್ಯ ಕಾಪಾಡದಿರುವುದು ಇತ್ಯಾದಿ ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ದಂಡ ವಸೂಲಾತಿ ಮಾಡಲು ಹಾಗೂ ಬಾಡಿಗೆ ಸಂಗ್ರಹ ಕಾರ್ಯಕ್ಕೆ ಬಳಸಲು ಉದ್ದೇಶಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಮಾಹಿತಿ ನೀಡಿದರು.
ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಎಚ್‍ಡಿಎಫ್‍ಸಿ ಬ್ಯಾಂಕ್‍ನ ಅಧಿಕಾರಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!