ಶಿವಮೊಗ್ಗ, ಡಿಸೆಂಬರ್ 18 : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ ಡಿ ನೋಟಿಫೈ ಆದ ಪ್ರದೇಶಗಳ ವಿವರ ಹಾಗೂ ಸಂತ್ರಸ್ತರ ಸಮಗ್ರ ಮಾಹಿತಿ ಸಂಗ್ರಹಣೆಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕಾರ್ಯದಲ್ಲಿ ಪ್ರಗತಿ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅವರು ಪ್ರಗತಿ ಪರಿಶೀಲನೆ ನಡೆಸಿದರು.
ಹಲವು ದಶಕಗಳಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ಬಗೆಹರಿಸಲು ಜಂಟಿ ಸರ್ವೆ ನಡೆಸಿ 20ದಿನಗಳ ಒಳಗಾಗಿ ಒಂದು ಹಂತಕ್ಕೆ ತರುವಂತೆ ಅವರು ತಿಳಿಸಿದರು.
ಮುಳುಗಡೆ ಸಂತ್ರಸ್ತರಿಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಂತೆ ಅರಣ್ಯ ಪ್ರದೇಶದಲ್ಲಿ 8285ಎಕ್ರೆ, ಕಂದಾಯ ಭೂಮಿಯಲ್ಲಿ 1100 ಎಕ್ರೆ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯೇತರ ಜಿಲ್ಲೆಗಳಲ್ಲಿ 387ಎಕ್ರೆ ಸೇರಿದಂತೆ ಒಟ್ಟು 9773ಎಕ್ರೆ ಜಮೀನು ಮೀಸಲಿರಿಸಲಾಗಿದೆ. ಇದರಲ್ಲಿ 6303 ಎಕ್ರೆ ಡಿನೋಟಿಫೈ ಮಾಡಲಾಗಿದೆ. ಸಂತ್ರಸ್ತರಿಗಾಗಿ ಮೀಸಲಾಗಿರಿಸಿರುವ ಪ್ರದೇಶದಲ್ಲಿ ಇನ್ನೂ 1982ಎಕ್ರೆ ಡಿ ನೋಟಿಫೈ ಮಾಡಲು ಬಾಕಿ ಇದೆ. ಜಂಟಿ ಸಮೀಕ್ಷೆ ನಂತರ ಫಲಾನುಭವಿವಾರು ಡಿನೋಟಿಫಿಕೇಶನ್ ವಿಸ್ತೀರ್ಣಕ್ಕೆ ಆರ್‍ಟಿಸಿಯಲ್ಲಿ 3565ಎಕ್ರೆ ತಾಳೆಯಾಗಿದೆ. 2737 ಎಕ್ರೆ ಇನ್ನೂ ತಾಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು.
ಇದು ಕ್ಲಿಷ್ಟಕರ ಪ್ರಕ್ರಿಯೆಯಾಗಿದ್ದು, ಜಂಟಿ ಸರ್ವೆ ಮಾಡಿ ಪ್ರಕರಣವಾರು ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದರೆ ಪ್ರಕ್ರಿಯೆ ತ್ವರಿತಗೊಳಿಸಬಹುದಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಅವರೊಂದಿಗೆ ಸಭೆ: ಚಕ್ರಾ, ಸಾವೆಹಕ್ಲು ಯೋಜನೆಯಡಿ ಭೂಮಿ ಕಳೆದುಕೊಂಡಿರುವವರಿಗೆ ಸಮಗ್ರ ಪರಿಹಾರ ಒದಗಿಸಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ಕಂದಾಯ ಜಮೀನನ್ನು ಪ್ರಸ್ತಾವಿತ ಅರಣ್ಯ ಎಂದು ಆರ್‍ಟಿಸಿಯಲ್ಲಿ ನಮೂದು ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ತಕ್ಷಣ ಅದನ್ನು ಸರಿಪಡಿಸಬೇಕು ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಒತ್ತಾಯಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಚನ್ನಬಸಪ್ಪ, ಸಿಸಿಎಫ್ ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ಅನುರಾಧ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.