ಶಿವಮೊಗ್ಗ, ಫೆಬ್ರವರಿ 02 : ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ದಿನಾಂಕ: 27.01.2022 ರಂದು ಮದ್ಯಾಹ್ನ ಶಿವಮೊಗ್ಗ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಯೊಬ್ಬರು ಬಿದ್ದು ಗಾಯಗೊಂಡಿರುವುದಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಕಾರಣವಾಗಿರುವುದಿಲ್ಲ ಎಂದು ಸ್ಮಾರ್ಟ್ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್ ವಟಾರೆ ತಿಳಿಸಿದ್ದಾರೆ.
ಅದು ದಿನೇಶ್ ಇಂಜಿನಿಯರಿಂಗ್ ಲಿಮಿಟೆಡ್ ಎಂಬ ಕಂಪನಿಯವರು ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ಅನುವಾಗುವಂತೆ ಹಾರಿಜಾಂಟಲ್ ಡೈರೆಕ್ಷನ್ ಡ್ರಿಲ್ಲಿಂಗ್ ಗಾಗಿ ತೋಡಿದ ಗುಂಡಿಯಾಗಿರುತ್ತದೆ.
ಸದರಿ ಕಂಪನಿಯವರಿಗೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯಾಪ್ತಿ ಪ್ರದೇಶದಲ್ಲಿ ಹೆಚ್.ಡಿ.ಡಿ. ಮಾಡದಂತೆ ಹಾಗೂ ಸ್ಮಾರ್ಟ್ ಸಿಟಿಯ ವತಿಯಿಂದ ಈಗಾಗಲೇ ಅಳವಡಿಸಿರುವ 7 ವೇ ಮಲ್ಟಿ ಡಕ್ಟ್ ಮುಖಾಂತರವೇ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವಂತೆ ದಿನಾಂಕ:27.12.2021 ರ ನೋಂದಾಯಿತ ಅಂಚೆಯ ಪತ್ರದ ಮೂಲಕ ತಿಳುವಳಿಕೆ ನೀಡಲಾಗಿದೆ ಹಾಗೂ ಈ ಕಂಪೆನಿಯ ಪ್ರತಿನಿಧಿಗಳಾದ ಸಂಜಯ್, ಪದ್ಮರಾಜ್ ಹಾಗೂ ಕಿರಣ್ ಎಂಬುವರಿಗೆ ಮುಖತ: ಹಾಗೂ ದೂರವಾಣಿ ಮೂಲಕ ಹಲವು ಬಾರಿ ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ಯಾವುದೇ ಪಾತ್ರ ಇರುವುದಿಲ್ಲ. ಬದಲಿಗೆ ಯಾವುದೇ ಆಕಸ್ಮಿಕಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದಾಗ್ಯೂ ನೀಡಿದ ಸೂಚನೆಯನ್ನು ಮೀರಿ ಯಾರಿಗೂ ತಿಳಿಯದಂತೆ ತಡರಾತ್ರಿ ವೇಳೆಯಲ್ಲಿ ಗುಂಡಿ ತೆಗೆದು ಅಪಘಾತಕ್ಕೆ ಕಾರಣರಾದ ‘ದಿನೇಶ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಯ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಈ ಕಚೇರಿ ವತಿಯಿಂದ ಪೆÇಲೀಸ್ ಅಧಿಕಾರಿಗಳನ್ನು ಕೋರಲಾಗಿದೆ.
ನಗರದಲ್ಲಿ ಯಾವುದೇ ಆಕಸ್ಮಿಕಗಳು ನಡೆದಲ್ಲಿ ಮೂಲ ಕಾರಣವನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪಡೆಯದೇ ನೇರವಾಗಿ ಸ್ಮಾರ್ಟ್ ಸಿಟಿಯ ಮೇಲೆ ಅನಗತ್ಯ ಆಪಾದನೆ ಹೊರಿಸಿ ಪತ್ರಿಕೆಗಳಲ್ಲಿ ವರದಿ ಪ್ರಕಟಿಸುವುದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಆದ್ದರಿಂದ ಸ್ಟಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಯಾವುದೇ ಆಕಸ್ಮಿಕಗಳು ನಡೆದಾಗ ಘಟನೆಗೆ ಕಾರಣವನ್ನು ತಿಳಿದುಕೊಂಡು ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ಮಾಡುವುದು. ಸೂಕ್ತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
