ಶಿವಮೊಗ್ಗ, ಮಾರ್ಚ್ 16 :
     ಯಾರೂ ಕೂಡ ಲಿಂಗಪತ್ತೆಗಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‍ನ್ನು ಮಾಡಿಸಬಾರದು ಮತ್ತು ಮಾಡಬಾರದು. ಆಧುನಿಕ ವೈದ್ಯಕೀಯ ತಂತ್ರವಿಧಾನಗಳ ಸರಿಯಾದ ಬಳಕೆ ಆಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಿಹೆಚ್‍ಓ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ, ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ-1994 ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
     ಮಕ್ಕಳಿಗೆ ಜನ್ಮ ನೀಡುವ ಮಹಿಳೆಯನ್ನು ತುಚ್ಚವಾಗಿ ಕಾಣುವುದು ಸರಿಯಲ್ಲ. ಪುರುಷ ಮಕ್ಕಳಿಗೆ ಜನ್ಮ ನೀಡಲು ಬರುವುದಿಲ್ಲ. ಪ್ರಕೃತಿ ಮಹಿಳೆಗೆ ನೀಡಿರುವ ವಿಶೇಷ ಕೊಡುಗೆ ಜನ್ಮ ನೀಡುವುದು. ಇಂತಹ ಜನ್ಮದಾತೆಯನ್ನು ಹೆಣ್ಣೆಂದು ತುಚ್ಚೀಕರಿಸಬಾರದು. ಹೆಣ್ಣೇ ಹೆಣ್ಣಿಗೆ ಶತ್ರು ಎಂಬ ಮಾತಿದ್ದು, ಅದು ಆಗಬಾರದು. ಕುಟುಂಬದ ಹಂತದಿಂದಲೇ ಗಂಡು-ಹೆಣ್ಣು ಇಬ್ಬರೂ ಸರಿ ಸಮಾನರನ್ನಾಗಿ ಕಾಣಬೇಕು ಎಂದರು.
    ಪ್ರಸ್ತುತ ಮಹಿಳೆ ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸರಿ ಸಮಾನಳಾಗಿ ಸ್ಪರ್ಧಿಸುತ್ತಿದ್ದಾಳೆ. ದುಡಿಯುತ್ತಿದ್ದಾಳೆ. ಸಮಾಜ ಹಾಗೂ ಸಂಸಾರದಲ್ಲಿ ಹೆಣ್ಣಿನ ಪಾತ್ರ ಮಹತ್ತರದ್ದಾಗಿದ್ದು ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ಯಾರೂ ಕೂಡ ಲಿಂಗಬೇಧ ಮಾಡಬಾರದು.
      ಕಾನೂನುಗಳ ಸಮರ್ಪಕ ಪಾಲನೆಯಾಗಬೇಕು. ವೈದ್ಯಕೀಯ ಸೌಲಭ್ಯಗಳ ಸದ್ಬಳಕೆ ಆಗಬೇಕು. ಭ್ರೂಣ ಹತ್ಯೆಯಂತಹ ಪ್ರಕರಣಗಳು ಕಂಡುಬಂದರೆ ಪೊಲೀಸ್ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಬೇಕು. ಅದರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
     ಪಿಸಿಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ವೀಣಾ ಭಟ್ ಮಾತನಾಡಿ, ಇಂದಿಗೂ ಸಮಾಜದಲ್ಲಿ ಹೆಣ್ಣಿಗೆ ಎರಡನೇ ದರ್ಜೆ ಪ್ರಜೆಯ ಸ್ಥಾನವಿದೆ. ಹೆಣ್ಣಿಗೆ ಹೆಣ್ಣು ಶತ್ರು ಎಂಬ ಭಾವನೆ ಹುಟ್ಟಿಹಾಕಿರುವುದು ಸಮಾಜ. ಸಮಾಜದಲ್ಲಿ ಹೆಣ್ಣು ಅನುಭವಿಸುವ ನೋವು, ಬವಣೆಯಿಂದ ಮತ್ತೊಂದು ಹೆಣ್ಣು ಬೇಡವೆನ್ನುತ್ತಾಳೆಯೇ ಹೊರತು ಆಕೆಗೆ ಹೆಣ್ಣು ಮಗು ಕಷ್ಟವಲ್ಲ.
     ಹೆಣ್ಣು ಮನೆಯಲ್ಲಿ ನಿರಂತರವಾಗಿ ಕಾಯಕದಲ್ಲಿ ನಿರತಳಾಗಿರುತ್ತಾಳೆ. ಬಹುಕಾರ್ಯಗಳ ನಿರ್ವಹಣೆಯಲ್ಲಿ ನಿಷ್ಣಾತಳು. ಪರಂಪರೆಯ ನಿರಂತರತೆಯನ್ನು ಕಾಪಾಡಿಕೊಂಡು ಬರುತ್ತಿರುವ ಈಕೆಗೆ ಪ್ರಸ್ತುತ ಮನೆ ಮತ್ತು ಹೊರಗಡೆ ದುಡಿಮೆಯಲ್ಲಿ ಸಮತೋಲನ ಸಾಧಿಸುವುದು ಕಷ್ಟವಾಗುತ್ತಿದೆ. ಆರೋಗ್ಯ ಹದಗೆಡುತ್ತಿದೆ. ಇದರ ಬಗ್ಗೆ ಗಮನ ಬೇಕು. ಹಾಗೂ ಸುಧಾರಣೆಯಾಗಬೇಕೆಂದರು.

ಎಲ್ಲಿಯವರೆಗೆ ಮನದಾಳದಲ್ಲಿ ಲಿಂಗ ಸಮಾನತೆ ಬರುವುದಿಲ್ಲವೋ, ಮನೋಭಾವ ಬದಲಾಗುವುದಿಲ್ಲವೋ ಅಲ್ಲಿಯತನ ಏನೇ ಕಾನೂನು ಬಂದರೂ ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಕಷ್ಟ. ಲಿಂಗ ಸೂಕ್ಷ್ಮತೆ, ಸಮಾನತೆ ತಾಯಿ ಗರ್ಭದಿಂದಲೇ ಹಾಗೂ ಮನೆಯಿಂದ ಆರಂಭವಾಗಬೇಕು. ಹೆಣ್ಣು ತನ್ನ ಸಾಮಥ್ರ್ಯ ಮತ್ತು ಗಟ್ಟಿತನದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.
                                                                       -ಡಾ.ವೀಣಾ ಭಟ್

     ಹೆಣ್ಣು ಎಲ್ಲ ಕ್ಷೇತ್ರದಲ್ಲಿ ಇದ್ದಾಳೆಯಾದರೂ ರಾಜಕೀಯ, ಅಧಿಕಾರ ಹಂಚುವಿಕೆಯಲ್ಲಿ ಅವರ ಸಂಖ್ಯೆ ಕಡಿಮೆಯೇ. ಹಾಗೂ ಇನ್ನೂ ಕೂಡ ಗಂಡಸರ ಸಂತಾನಹರಣ ಶಸ್ತ್ರಚಿಕಿತ್ಸೆ ವ್ಯಾಸಕ್ಟಮಿ ಶೇ.2 ಸಾಧ್ಯವಾಗುತ್ತಿಲ್ಲವೆಂದರು.
     ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ವೈದ್ಯರಿಗೆ ಬಿ.ಸಿ.ರಾಯ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಐಎಂಎ ಅಧ್ಯಕ್ಷ ಡಾ.ಅರುಣ್ ಎಂ.ಎಸ್, ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಿವಾನಂದ, ವೆಂಕಟೇಶ್ ರಾವ್ ಹಾಜರಿದ್ದರು.

error: Content is protected !!