ವಮೊಗ್ಗ, ಫೆ.17 : ರೈತರ ಬದುಕು ಹಸನಾಗಲು, ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳ ಲಾಭ ರೈತರಿಗೆ ದೊರೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಅವರು ಬುಧವಾರ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯವಾಗಿ ದೊರಕುವ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಸ್ಥಳೀಯ ಯುವ ಉದ್ಯಮಿಗಳ ಏಳಿಗೆ ಸಾಧ್ಯ. ಇದರಿಂದ ಸ್ಥಳೀಯ ಉದ್ಯೋಗ ಸೃಷ್ಟಿಗೂ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಹೇಳಿದರು.ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸ್ಥಳೀಯವಾಗಿ ಆದಾಗ ಮಾತ್ರ ರೈತರಿಗೆ ಹೆಚ್ಚಿನ ಲಾಭ ದೊರೆಯುವುದು. ಇಂತಹ ಸಂಸ್ಕರಣೆಯ ಉದ್ದಿಮೆಗಳು ಹೆಚ್ಚಾದರೆ ಮಾತ್ರ ಕೃಷಿ ಲಾಭದಾಯಕವಾಗಲಿದೆ. ಸರ್ಕಾರ ಈ ಹಿನ್ನೆಲೆಯಲ್ಲಿ ಎಲ್ಲಾ ನೆರವು ನೀಡಲಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಿರುವ ನವೋದ್ಯಮ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಜಿಲ್ಲೆಯ 10 ನವೋದ್ಯಮಿಗಳಿಗೆ ಕೇಂದ್ರ ಸರ್ಕಾರದ ಅನುದಾನ ದೊರೆಯಲು ನೆರವಾಗಿದೆ ಎಂದು ಹೇಳಿದರು.
ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಕೆ, ಅಡಿಕೆ ಹಾಳೆಯನ್ನು ಚರ್ಮದಂತೆ ಪರಿವರ್ತಿಸಿ ಉತ್ಪನ್ನ ತಯಾರಿಕೆ, ಅಂಗಾಂಶ ಕೃಷಿಯಲ್ಲಿ ಬಾಳೆ ಉತ್ಪಾದನೆ, ಮಲೆನಾಡಿನ ವಿಶೇಷ ಹಣ್ಣುಗಳಿಂದ ಆರೋಗ್ಯ ಪೂರ್ಣ ವೈನ್ ತಯಾರಿಕೆಯಂತಹ ಯೋಜನೆಗಳಿಂದ ವಿಶ್ವವಿದ್ಯಾಲಯ ನವೋದ್ಯಮಿಗಳಿಗೆ ನೆರವಾಗುತ್ತಿರುವುದು ಶ್ಲಾಘನೀಯ. ಇದೀಗ ನೋನಿ ಅಥವಾ ಇಂಡಿಯನ್ ಮಲ್ಬರಿ ಹಣ್ಣಿನಿಂದ ತಯಾರಿಸಿರುವ ನೋನಿ ಚಹಾ ವಿಶಿಷ್ಟ ಉತ್ಪನ್ನವಾಗಿದ್ದು, ಇದರಿಂದ ಈ ಭಾಗದಲ್ಲಿ ನೋನಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮಾತನಾಡಿ, ಕೋವಿಡ್ ಹಿನ್ನೆಯಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ , ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.