ಶಿವಮೊಗ್ಗ ಸೆಪ್ಟೆಂಬರ್ 28 :ರೇಬಿಸ್ ಒಂದು ಮಾರಣಾಂತಿಕ ಕಾಯಿಲೆ. ಆದರೆ ಲಸಿಕೆ ಪಡೆಯುವ ಮೂಲಕ ಈ ಕಾಯಿಲೆಯಿಂದ ರಕ್ಷಣೆ ಪಡೆಯಬಹುದಾಗಿದ್ದು, ರೇಬಿಸ್ ರೋಗದ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಆರ್ಸಿಹೆಚ್ಓ ಡಾ.ನಾಗರಾಜನಾಯ್ಕ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಇವರ ಸಂಯುಕ್ತಾಶ್ರಯದಲ್ಲಿ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ರೇಬಿಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೇಬಿಸ್ ರೋಗ ನಾಯಿ ಕಡಿತದಿಂದ ಮತ್ತು ಬೆಕ್ಕು, ನರಿ ಇತರೆ ಪ್ರಾಣಿಗಳ ಕಡಿತದಿಂದ ಬರುತ್ತದೆ. ಕಡಿತವಾದ ನಂತರ ವೈದ್ಯರ ಬಳಿ ಹೋಗಿ ಆಂಟಿ ರೇಬಿಸ್ ಲಸಿಕೆ ಪಡೆಯುವುದು ಅತಿ ಮುಖ್ಯ. ಇದೊಂದು ಶೇ.100 ಮಾರಣಾಂತಿಕ ಕಾಯಿಲೆ. ರೋಗಲಕ್ಷಣಗಳು ಪ್ರಾರಂಭವಾದ ನಂತರ ಯಾವುದೇ ಚಿಕಿತ್ಸೆಯಿಂದ ಬದುಕಿಸಲು ಸಾಧ್ಯವಿರುವುದಿಲ್ಲ. ಆದ್ದರಿಂದ ನಾಯಿ ಕಡಿತಕ್ಕೊಳಗಾದವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಕಡಿತ, ಪರಚಿರುವುದು, ತರಚಿರುವುದು ಯಾವುದೇ ರೀತಿಯ ಗಾಯವಾದ ತಕ್ಷಣ ನೀರು ಮತ್ತು ಸೋಪಿನಿಂದ ತೊಳೆದು, ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿ ಕಡಿತಕ್ಕೆ ಉಚಿತವಾಗಿ ಲಸಿಕೆ ನೀಡಲಾಗುವುದು. ಹಾಗೂ ನಾಯಿ, ಬೆಕ್ಕು ಇತರೆ ಸಾಕು ಪ್ರಾಣಿ ಸಾಕುವವರು ಕಡ್ಡಾಯವಾಗಿ ತಮ್ಮ ಪ್ರಾಣಿಗಳಿಗೆ ಲಸಿಕೆ ಹಾಕಿಸಬೇಕು. ಕಡಿತಕ್ಕೊಳಗಾದವರು ಟಿಟಿ ಮತ್ತು ಆಂಟಿ ರೇಬಿಸ್ ಲಸಿಕೆ ಪಡೆಯಬೇಕು. ಪ್ರಾಣಿ ಕಡಿತವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ರೇಬಿಸ್ ಮಾರಣಾಂತಿಕ ರೋಗದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾಗುತ್ತದೆ. ‘ಒನ್ ಹೆಲ್ತ್, ಝೀರೊ ಡೆತ್’ ಎಂಬುದು ಈ ವರ್ಷದ ಘೋಷಣೆಯಾಗಿದೆ. ಮೊಟ್ಟ ಮೊದಲ ಬಾರಿಗೆ ರೇಬಿಸ್ ವಿರುದ್ದ ಪರಿಣಾಮಕಾರಿ ಲಸಿಕೆ ಕಂಡುಹಿಡಿದ ‘ಲೂಯಿಸ್ ಪಾಶ್ಚರ್’ ಎಂಬ ವಿಜ್ಞಾನಿ 1895 ರ ಸೆ.28 ರಂದು ಮರಣ ಹೊಂದಿದ್ದು, ಇವರ ಗೌರವಾರ್ಥ ಆ ದಿನದಂದು ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾಗುತ್ತಿದೆ.
ರೇಬಿಸ್ ರೋಗ ನಾಯಿ ಕಡಿತದಿಂದ ಸಂಭವಿಸುತ್ತದೆ. ಇದು ಒಂದು ಭಯಾನಕ ಕಾಯಿಲೆ ಆಗಿದ್ದು, ರೋಗಲಕ್ಷಣಗಳು ಪ್ರಾರಂಭವಾದ ನಂತರ ಯಾವುದೇ ಚಿಕಿತ್ಸೆಯಿಂದ ಬದುಕಿಸಲು ಸಾಧ್ಯವಿರುವುದಿಲ್ಲ. ಆದ್ದರಿಂದ ಇದು ಶೇ.100 ಮಾರಣಾಂತಿಕವಾಗಿರುತ್ತದೆ. ಈ ರೋಗಕ್ಕೆ ಪರಿಣಾಮಕಾರಿಯಾದ ಲಸಿಕೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುತ್ತದೆ. ನಾಯಿ ಕಡಿತ ಪ್ರಕರಣದಲ್ಲಿ ಕೂಡಲೇ ವೈದ್ಯರ ಸಲಹೆ ಮೇರೆಗೆ ಈ ಲಸಿಕೆಯನ್ನು ಪಡೆದುಕೊಂಡಲ್ಲಿ ರೇಬಿಸ್ ಸೋಂಕಿತ ನಾಯಿ ಕಚ್ಚಿದರೂ ಸಹ ಈ ಕಾಯಿಲೆಯನ್ನು ತಡೆಗಟ್ಟಬಹುದು. ಲಸಿಕೆ ಲಭ್ಯವಿದ್ದರೂ ಸಹ ಪ್ರತಿ ವರ್ಷ 60 ಸಾವಿರ ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.ಇದರಲ್ಲಿ ಹೆಚ್ಚಿನ ಮರಣಗಳು ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಸಂಭವಿಸುತ್ತದೆ. ಭಾರತದಲ್ಲಿ ಪ್ರತಿ ವರ್ಷ 17.4 ಮಿಲಿಯನ್ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಿದ್ದು, ಅದರಲ್ಲಿ 20 ಸಾವಿರ ಜನ ಮರಣ ಹೊಂದುತ್ತಿದ್ದಾರೆ. ಸಾರ್ವಜನಿಕರು ನಾಯಿ ಅಥವಾ ಯಾವುದೇ ಪ್ರಾಣಿಗಳು ಕಚ್ಚಿದಾಗ ತಡಮಾಡದೇ ವೈದ್ಯರ ಸಲಹೆ ಮೇರೆಗೆ ಲಸಿಕೆಯನ್ನು ಪಡೆದುಕೊಂಡಲ್ಲಿ ಇಂತಹ ಸಾವನ್ನು ತಡೆಗಟ್ಟಬಹುದು.
ಶಿವಮೊಗ್ಗ ಜಿಲ್ಲೆಯಲ್ಲಿ 2022 ರ ಜನವರಿಯಿಂದ ಇಲ್ಲಿಯವರೆಗೆ 12,336 ನಾಯಿಕಡಿತ ಪ್ರಕರಣಗಳು ವರದಿಯಾಗಿರುತ್ತವೆ. ಇದರಲ್ಲಿ ಒಂದು ಪ್ರಕರಣದಲ್ಲಿ ಮರಣ ಸಂಭವಿಸಿರುತ್ತದೆ. ರೇಬಿಸ್ ಕಾಯಿಲೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದರೊಂದಿಗೆ ಇದರಿಂದ ಸಾವನ್ನಪ್ಪುವ ಪ್ರಕರಣವನ್ನು ಸೊನ್ನೆಗಿಳಿಸುವಲ್ಲಿ ಎಲ್ಲರೂ ಸಹಕರಿಸಬೇಕೆಂದರು.
ಎನ್ಎಸ್ಎಸ್ ಅಧಿಕಾರಿ ಡಾ.ರೇಷ್ಮಾ ಮಾತನಾಡಿ, ರೇಬಿಸ್ ಸೇರಿದಂತೆ ಆರೋಗ್ಯದ ಕುರಿತು ನಾವೆಲ್ಲ ಹೆಚ್ಚೆಚ್ಚು ಜಾಗೃತರಾಗಬೇಕು. ರೇಬಿಸ್ ಬಗ್ಗೆ ಹೆಚ್ಚಿನ ಅರಿವಿಲ್ಲದೆ ಶಿವಮೊಗ್ಗದವರೇ ಆದ ಉಪನ್ಯಾಸಕರೋರ್ವರು ಇತ್ತೀಚಿಗೆ ಇದರಿಂದ ಸಾವನ್ನಪ್ಪಿದರು. ಅವರು ವಾಯುವಿಹಾರಕ್ಕೆ ಹೊರಟಾಗ ನಾಯಿ ಪರಚಿದ್ದನ್ನು ಅವರು ನಿರ್ಲಕ್ಷಿಸಿ, ಕೊನೆಗೆ ಅನಾರೋಗ್ಯಕ್ಕೀಡಾಗಿ, ಅನೇಕ ವೈದ್ಯರು, ಆಸ್ಪತ್ರೆಗಳು ಮತ್ತು ಪರೀಕ್ಷೆಗಳ ನಂತರ ಅದು ರೇಬಿಸ್ ಎಂದು ಗೊತ್ತಾಯಿತು. ಆದ್ದರಿಂದ ಇಂತಹ ರೋಗಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕೆಂದರು.
ಇದೇ ಸಂದರ್ಭದಲ್ಲಿ ರೇಬಿಸ್ ರೋಗದ ಅರಿವು ಕುರಿತಾದ ಕರಪತ್ರಗಳನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ಹಾಗೂ ರೇಬಿಸ್ ಕುರಿತು ಅರಿವು ಮೂಡಿಸುವ ವಿಡಿಯೋ ವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಷ್ಣುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಶಿವಯೋಗಿ ಎಲಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಓರಲ್ ಹೆಲ್ತ್ ವಿಭಾಗದ ವೈದ್ಯ ಡಾ.ಮೋಹನ್, ಐಇಸಿ ಇನ್ಚಾರ್ಜ್ ದೊಡ್ಡವೀರಪ್ಪ, ಎನ್ಎಸ್ಎಸ್ ಅಧಿಕಾರಿಗಳಾದ ಶಿವಮೂರ್ತಿ, ಸೋಮಶೇಖರ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಮಾ ಇನ್ನಿತರರು ಹಾಜರಿದ್ದರು.
(ಫೋಟೊ ಇದೆ)