ವಿಶ್ವ ಪರಿಸರ ದಿನವಾದ ಇಂದು ರಘು ಹಾಗು ಸ್ನೇಹಿತರು ಗಿಡ ನೆಟ್ಟು ಸಂಭ್ರಮಿಸಿದರು

ಇರುವುದೊಂದೆ ಭೂಮಿ- ಪ್ರಕೃತಿಯೊಂದಿಗೆ ಸಾಮರಸ್ಯವಿರಲಿ
ವಿಶ್ವದಲ್ಲಿ ಕೊಟ್ಯಾಂತರ ನಕ್ಷತ್ರ ಪುಂಜಗಳಿವೆ(ಗ್ಯಾಲಕ್ಸಿ), ನಮ್ಮ ನಕ್ಷತ್ರ ಪುಂಜದಲ್ಲಿ ಕೊಟ್ಯಾಂತರ ಗ್ರಹಗಳಿವೆ. ಆದರೆ ಅವುಗಳಲ್ಲಿ ವಾಸಿಸಲು ಯೊಗ್ಯವಾದ ಗ್ರಹ ಭೂಮಿಯೊಂದೆ. ಜಾಗತಿಕ ತಾಪಮಾನ, ಮಾಲಿನ್ಯ, ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಭೂಮಿ ಇಂದು ವಿನಾಶದೆಡೆಗೆ ಸಾಗುತ್ತಿದೆ. ಇದಕ್ಕೆಲ್ಲ ಮಾನವನ ದುರಾಸೆಯೇ ಕಾರಣ. ಭೂಮಿಯ ಮೇಲೆ ಆಧುನಿಕತೆ ಬೆಳೆದಂತೆಲ್ಲ ಭೂಮಿ ನಿರಂತರವಾಗಿ ಶೋಷಣೆಗೊಳಗಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದೆ.


ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆಯಿಂದ 1974 ರಿಂದ ರೂಪುಗೊಂಡ ವಿಶ್ವ ಪರಿಸರ ದಿನವು ಪ್ರತಿ ವರ್ಷ ಜೂನ್ 5 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. 2022 ರ ವಿಶ್ವ ಪರಿಸರ ದಿನವು “ಕೇವಲ ಒಂದೇ ಭೂಮಿ”ಯೆಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ದಿನದ ವಿಶೇಷವೆಂದರೆ-ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ, ಸಂಪನ್ಮೂಲಗಳ ಅತಿಯಾದ ಬಳಕೆ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಉತ್ತಮ ಪರಿಸರ ನಿರ್ಮಿಸಲು ಜಾಗೃತಗೊಳಿಸುವುದಾಗಿದೆ.
ಭೂಮಿಯು ಸುಮಾರು 8 ಮಿಲಿಯನ್ ಪ್ರಬೇಧದ ಜೀವಿಗಳು, ಮನುಷ್ಯರು ಮತ್ತು ಸಸ್ಯವರ್ಗವನ್ನು ಒಳಗೊಂಡಿದೆ ಆದರೆ ಅವುಗಳಿಗೆ ಮಾನವ ನಿರ್ಮಿತ ಅಂಶಗಳು ಅಪಾಯವನ್ನೊಡ್ಡಿದೆ.


ಭೂಮಿಯ ಮೇಲೆ ಹೆಚ್ಚುತ್ತಿರುವ ಸಂಪನ್ಮೂಲಗಳ ಮೇಲಿನಶೋಷಣೆ ಮತ್ತು ಮಾಲಿನ್ಯವು ಪರಿಸರಕ್ಕೆ ಹಲವು ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಮಾರಕವಾಗಿದೆ ಹಾಗೂ ಭೂಕಂಪ, ಪ್ರವಾಹ, ಬರಗಾಲಗಳಂತಹ ಅಪಾಯಕಾರಿ ಕ್ರಿಯೆಗಳು ಉದ್ಭವಿಸುತ್ತಿದೆ. ಇಂದು ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಪ್ರತಿವರ್ಷ 7 ಮಿಲಿಯನ್ ಜನರು ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ.
ಅರಣ್ಯನಾಶದಿಂದಾಗಿ ಇಂದು ಮಳೆಯ ಕೊರತೆ ಮತ್ತು ಜಾಗತಿಕ ತಾಪಮಾನ ಏರುತ್ತಲೇ ಇದೆ. ಅಧಿಕ ತಾಪಮಾನದಿಂದಾಗಿ ಭೂಮಿಯ ಮೇಲಿನ ರಾಶಿಯು ಕರಗಿ ಪ್ರವಾಹವಾಗುವುದರ ಜೊತೆಗೆ ಸಮುದ್ರದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಕರಾವಳಿ ತೀರ ಪ್ರದೇಶಗಳಿಗೆ ಅಪಾಯವನ್ನೊಡ್ಡಿದೆ.

 ಇಂದು ಭೂಮಿಯ ಮೇಲಾಗುತ್ತಿರುವ ಶೊಷಣೆಗಳನ್ನು ತಡೆಯಬೇಕಾಗಿದೆ ಇದಕ್ಕೆ ಪ್ರಮುಖ ಕಾರಣಗಳೆಂದರೆ-

• ಪ್ರತೀವರ್ಷ ಸುಮಾರು 90 ಬಿಲಿಯನ್ ಟನ್‍ಗಳಷ್ಟು ಸಂಪನ್ಮೂಲಗಳನ್ನು ಭೂಮಿಯಿಂದ ಹೊರತೆಗೆಯಲಾಗುತ್ತಿದೆ ಹಾಗೂ ಸುಮಾರು 70% ರಷ್ಟು ಸಂಪನ್ಮೂಲಗಳನ್ನು ಅತಿಯಾಗಿ ಬಳಸಲಾಗಿದೆ.
• ಪ್ರತೀವರ್ಷ 12 ಶತಕೋಟಿ ಟನ್‍ಗಳಷ್ಟು ತ್ಯಾಜ್ಯ ಭೂಮಿಯ ಮೇಲೆ ಸೃಷ್ಟಿಯಾಗುತ್ತಿದೆ, ಇದರಲ್ಲಿ 50 ಮಿಲಿಯನ್ ಟನ್‍ನಷ್ಟು ಇ-ತ್ಯಾಜ್ಯ ಸೇರಿದೆ.
• 2050ರ ವೇಳೆಗೆ ವಿಶ್ವದಲ್ಲಿನ ಜನಸಂಖ್ಯೆ ಆಹಾರಕ್ಕಾಗಿ ಹಲವು ಸಮಸ್ಯೆಗಳನ್ನು ಎದುರಿಸಲಿದೆ. 2070ರ ವೇಳೆಗೆ ಸಮುದ್ರದಲ್ಲಿನ ಹವಳದ ದಿಬ್ಬಗಳು ಸಂಪೂರ್ಣವಾಗಿ ಮಾಯವಾಗಲಿದೆ.


ಮೇಲಿನ ಎಲ್ಲಾ ಸಮಸ್ಯೆಗಳು ಸೃಷ್ಟಿಯಾಗಿರುವುದು ಮನುಷ್ಯನ ದುರಾಸೆಯಿಂದಲೇ ಆಗಿವೆ. ಆದ್ದರಿಂದ ಭವಿಷ್ಯದಲ್ಲಿ ಕಾಡುವ ಪರಿಸರ ಸಮಸ್ಯೆಗಳನ್ನು ತಡೆಯಲು ಮನುಷ್ಯನಿಂದಲೇ ಸಾಧ್ಯವಾದ್ದರಿಂದ ನಾವೆಲ್ಲರು ಮಾಡಬೇಕಾದ ಕೆಲಸಗಳೆಂದರೆ- ಯಾವ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲವೊ ಆ ವಸ್ತುವನ್ನು ಬಳಸಲೇ ಬಾರದು. ಹಸಿರಿನೊಂದಿಗೆ ಜೀವಿಸುವುದಕ್ಕಾಗಿ ಗಿಡಗಳನ್ನು ನೆಡುವುದು, ಭೂಮಿಯ ಮೇಲಿನ ಸಂಪನ್ಮೂಲಗಳ ಸರಿಯಾದ ಬಳಕೆ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು, ತ್ಯಾಜ್ಯವಸ್ತುಗಳ ಸರಿಯಾದ ವಿಲೇವಾರಿ, ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಹಾಗು ಸ್ವಯಂ ಸೇವಕರಾಗಿ ಪರಿಸರದ ಸಂರಕ್ಷಣೆಯಲ್ಲಿ ತೊಡಗುವುದಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯವು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಅದರ ಮಾಲಿನ್ಯವನ್ನು ತಡೆಯಲು ವ್ಯವಸ್ಥಿತ ಬದಲಾವಣೆಯ ಅಗತ್ಯವಿದೆ. ಉದಾಹರಣೆಗೆ ಸಾಗರಗಳಿಗೆ ಪ್ಲಾಸ್ಟಿಕ್ ತ್ಯಾಜ್ಯದ ಸೇರ್ಪಡೆಯು ಭೀಕರ ಮಾಲಿನ್ಯದೊಂದಿಗೆ ಅಪಾರ ಹಾನಿಯನ್ನುಂಟು ಮಾಡುತ್ತದೆ.
ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ, ಉಂಟಾಗುವ ಸಮುದ್ರಮಟ್ಟದ ಏರಿಕೆಯಿಂದಾಗಿ ಕರಾವಳಿ ಪ್ರದೇಶಗಳಿಗೆ ಹಾನಿಯಾಗುತ್ತಿದೆ. ಹಾಗಾಗಿ ಪರಿಸರ ವ್ಯವಸ್ಥೆಯನ್ನು ಮರು ಸ್ಥಾಪಿಸುವ ಮೂಲಕ ಹವಾಮಾನ ವೈಪರೀತ್ಯಗಳನ್ನು ಕಡಿಮೆ ಮಾಡಬೇಕಾಗಿದೆ.
ಭೂಮಿಯ ಮೇಲೆ ವಾಸಿಸುವ ಸಕಲ ಜೀವಿಗಳಿಗೂ ಭೂಮಿಯೊಂದೆ ಜೀವಿಸಲು ಯೊಗ್ಯವಾದ್ದರಿಂದ ಭೂಮಿಯ ಸಂರಕ್ಷಣೆ ಇಂದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದನ್ನರಿತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ನಾವು ಬದುಕಲು, ಪ್ರೀತಿಸಲು ಮತ್ತು ಏಳಿಗೆ ಹೊಂದಲು ಭೂಮಿಯ ಸರ್ವತೊಮುಖ ಸಂರಕ್ಷಣೆಗಾಗಿ ಶ್ರಮಿಸುವುದು ಅಗತ್ಯವಾಗಿದೆ.

ರಿತೇಶ್ ನಾಯ್ಕ
ಅಪ್ರೆಂಟಿಸ್, ವಾರ್ತಾ ಇಲಾಖೆ ಶಿವಮೊಗ್ಗ

error: Content is protected !!