News Next

ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಚೆಕ್‍ಪೋಸ್ಟ್ ಬಿಗಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಸ್ಕ್ ಧರಿಸದಿದ್ದರೆ ದಂಡ: ಮಾಸ್ಕ್ ಧರಿಸುವುದನ್ನು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಉಲ್ಲಂಘನೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೂ.200 ಹಾಗೂ ಇತರ ಕಡೆಗಳಲ್ಲಿ ರೂ. 100 ದಂಡ ವಿಧಿಸಲಾಗುವುದು. ಸಾಮಾಜಿಕ ಅಂತರ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳ ನಡುವೆ ಕನಿಷ್ಟ 1ಮೀಟರ್ ಅಂತರ ಪಾಲಿಸಬೇಕು. ಈ ಕುರಿತು ವ್ಯಾಪಕವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಸಾಮಾಜಿಕ ಅಂತರ ಪಾಲಿಸಲು ಕ್ರಮ ಕೈಗೊಳ್ಳದಿರುವ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ತಾಲೂಕು ಮಟ್ಟದಲ್ಲಿ ಉಸಿರಾಟದ ತೊಂದರೆ ಮತ್ತಿತರ ರೋಗ ಲಕ್ಷಣಗಳಿರುವ ರೋಗಿಗಳನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ. ಚಿಕಿತ್ಸೆ ವಿವರಗಳನ್ನು ನೀಡದ ಕ್ಲಿನಿಕ್‍ಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆಸರಿನಲ್ಲಿ ಪ್ರಕರಣ ದಾಖಲು ಮಾಡಬೇಕು. ತಹಶೀಲ್ದಾರ್ ಕಡ್ಡಾಯವಾಗಿ ಎಲ್ಲಾ ಕ್ಲಿನಿಕ್‍ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಲೋಪ ಸಂಭವಿಸಿದರೆ ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಹಾರ ಪದಾರ್ಥಗಳನ್ನು ಬೀದಿ ಬದಿ ಮಾರಾಟ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಕೈಗಾರಿಕಾ ಸಂಸ್ಥೆಗಳಿಗೆ ಎರಡು ದಿನಗಳಿಗೊಮ್ಮೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ, ಈ ಕುರಿತು ಸರ್ಕಾರ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯನ್ನು ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.


error: Content is protected !!