ಕೊರೋನಾ ಸೋಂಕು ಹರಡುವುದೆಂಬ ಭೀತಿಯಲ್ಲಿ ರಾಷ್ಟ್ರದಾದ್ಯಂತ ಲಾಕ್‍ಡೌನ್ ಮಾಡಲಾಗಿದ್ದು, ಮಧ್ಯಮ ವರ್ಗದ ರೈತರಿಗೆ ಅದರಲ್ಲೂ ತರಕಾರಿಗಳನ್ನು ಬೆಳೆದ ರೈತರಿಗೆ ಇದು ಆತಂಕ ಸೃಷ್ಟಿಸಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಧೃತಿಗೆಡದೆ ತಾನು ಬೆಳೆದ ತರಕಾರಿಗಳನ್ನು ಮಾರಾಟ ಮಾಡಿ ಲಾಭ ಗಳಿಸಿದ್ದಾರೆ ಶಿಕಾರಿಪುರ ತಾಲ್ಲೂಕು, ಸಹಸ್ರವಳ್ಳಿ ಗ್ರಾಮದ ಶ್ರೀ ದುರ್ಗಪ್ಪ ಅಂಗಡಿಯವರು.


ಶ್ರೀ ದುರ್ಗಪ್ಪ ಅಂಗಡಿಯವರು ಕಳೆದ ಕೆಲವು ವರ್ಷಗಳಿಂದ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳ ಮಾರ್ಗದರ್ಶನದಿಂದ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಮ್ಮ 2 ಎಕರೆ ಪ್ರದೇಶದಲ್ಲಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಕೃಷಿ ಹೊಂಡ, ಎರೆಹುಳುಗೊಬ್ಬರ ತಯಾರಿಕೆ ಘಟಕಗಳನ್ನು ಸ್ಥಪಿಸಿಕೊಂಡಿದ್ದರೆ. ತೋಟಗಾರಿಕೆ ಬೆಳೆಗಳಾದ ಬಾಳೆ ಮತ್ತು ಅಡಿಕೆಯ ಬೆಳೆಗಳ ಮಧ್ಯೆ ಅಂತರ ಬೆಳೆಯಾಗಿ ತರಕಾರಿ ಬೆಳೆಗಳಾದ ತೊಂಡೆಕಾಯಿ, ನುಗ್ಗೆಕಾಯಿ, ಸೌತೆಕಾಯಿ, ಟೊಮ್ಯಾಟೋ, ಬದನೆಕಾಯಿ ಮತ್ತು ಬೀನ್ಸ್ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಆದರೆ ಲಾಕ್‍ಡೌನ್ ಅವಧಿಯಲ್ಲಿ ತಾನು ಬೆಳೆದ ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕಂಗಾಲಾದ ದುರ್ಗಪ್ಪನವರು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಬಿ.ಸಿ.ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಮತ್ತು ಕು|| ಸ್ಮಿತಾ ಜಿ. ಬಿ., ವಿಜ್ಞಾನಿ (ತೋಟಗಾರಿಕೆ) ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿಜ್ಞಾನಿಗಳು ರೈತನಿಗೆ ಧೃತಿಗೆಡದಂತೆ ಧೈರ್ಯತುಂಬಿ, ಕೊರೋನಾ ರೋಗವು ಹರಡದಂತೆ ಮೂಲ ರಕ್ಷಣಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದ್ದಾರೆ. ವಿಜ್ಞಾನಿಗಳು ತಿಳಿಸಿದ ಹಾಗೆ ದುರ್ಗಪ್ಪನವರು ಪರಿಚಯಸ್ತ ಹಾಗೂ ಆರೋಗ್ಯವಂತ ಇಬ್ಬರು ಕೃಷಿ ಕಾರ್ಮಿಕರನ್ನು ನೇಮಿಸಿಕೊಂಡು ತರಕಾರಿಗಳನ್ನು ಕೊಯ್ಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಕಾರ್ಮಿಕರಿಗೆ ಮುಖಗವಸ, ಕೈತೊಳೆಯಲು ಸೋಪನ್ನು ಕೊಟ್ಟು ಶುಚಿತ್ವದಿಂದ ಇರುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ, ತಾವು ತರಕಾರಿಗಳನ್ನು ಸಾಗಿಸುವ ವಾಹನ, ಗೋಣಿಚೀಲ ಮತ್ತು ಉಪಯೋಗಿಸುವ ವಸ್ತುಗಳನ್ನು ಸೋಂಕು ನಿವಾರಕ ರಾಸಾಯನಿಕಗಳಿಂದ ಶುದ್ಧಗೊಳಿಸಿಕೊಂಡು ತರಕಾರಿಗಳನ್ನು ಸಂಗ್ರಹಣೆ ಮಾಡಿಕೊಂಡಿದ್ದಾರೆ. ದೂರದ ಗ್ರಾಮಗಳಿಗೆ ಸಾಗಾಟಕ್ಕೆ ಅವಕಾಶ ಇಲ್ಲದೆ ಇದ್ದುದ್ದರಿಂದ ತಾವೇ ಖುದ್ದು ತರಕಾರಿಗಳನ್ನು ಸ್ಥಳೀಯವಾಗಿ ಮನೆ ಮನೆಗೆ ಹೋಗಿ ತರಕಾರಿಗಳನ್ನು ಮಾರಾಟ ಮಾಡಿದ್ದಾರೆ. ಮಾರಾಟ ಮಾಡುವ ಸಂದರ್ಭದಲ್ಲಿ ದುರ್ಗಪ್ಪ ಅಂಗಡಿಯವರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸ ಧರಿಸಿ ಮಾರಾಟ ಮಾಡಿದ್ದಾರೆ. ಇವರು ಅನುಸರಿಸುತ್ತಿರುವ ಈ ಮುಂಜಾಗ್ರತಾ ಕ್ರಮಗಳಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ, ಇವರಿಂದ ತರಕಾರಿಗಳನ್ನು ಖರೀದಿಸಿದ್ದಾರೆ.


ಒಬ್ಬ ಮಧ್ಯಮ ವರ್ಗದ ಸಣ್ಣ ರೈತ, ಲಾಕ್‍ಡೌನ್‍ನಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗುತ್ತಿತ್ತು ರೈತನಾದ ದುರ್ಗಪ್ಪನವರ ಪರಿಸ್ಥಿತಿ. ಆದರೆ ಸಮಯಕ್ಕೆ ಸರಿಯಾಗಿ ವಿಜ್ಞಾನಿಗಳ ಸಲಹೆ, ನೇರ ಮಾರುಕಟ್ಟೆಯಿಂದ ಅವರ ಮುಖದಲ್ಲಿ ಮಂದಹಾಸ ಬೀರುವ ಹಾಗೆ ಮಾಡಿದೆ. ರೈತ ಉತ್ಪಾದಕರ ಸಂಘ ಹಾಗೂ ಹಾಪ್‍ಕಾಮ್ಸ್‍ಗಳ ಮುಖಾಂತರ ಜೊತೆಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡ ಇವರು ಹೇಳುವ ಪ್ರಕಾರ 20/- ರೂ.ನಂತೆ 20 ಕ್ವಿಂಟಾಲ್ ತೊಂಡೆಕಾಯಿ, 25/- ರೂ.ನಂತೆ 5 ಕ್ವಿಂಟಾಲ್ ನುಗ್ಗೆಕಾಯಿ, 20/- ರೂ.ನಂತೆ 6 ಕ್ವಿಂಟಾಲ್ ಟೊಮ್ಯಾಟೊ, 30/- ರೂ.ನಂತೆ 10 ಕ್ವಿಂಟಾಲ್ ಬೀನ್ಸ್ ಮಾರಾಟ ಮಾಡಿರುತ್ತಾರೆ. ಇದರಿಂದ ಒಟ್ಟು 54,500/- ರೂಪಾಯಿ ನಿವ್ವಳ ಆದಾಯ ಬಂದಿದೆ. ಈ ಎಲ್ಲಾ ತರಕಾರಿಗಳನ್ನು ಬೆಳೆಯಲು ಇವರು ಒಟ್ಟು ರೂ. 40,500/- ಖರ್ಚು ಮಾಡಿದ್ದು, ಲಾಕ್‍ಡೌನ್ ಮಧ್ಯೆಯೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ವ್ಯಾಪ್ತಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ ಪಡೆದು ಮಾರಾಟ ಮಾಡಲು ಸೂಕ್ತ ಮತ್ತು ಪರ್ಯಾಯ ದಾರಿಯ ಬಗ್ಗೆ ಚಿಂತಿಸದಿದ್ದರೆ ತರಕಾರಿಗಳು ಹೊಲದಲ್ಲಿ ಕೊಳೆತು ನಾರುತ್ತಿದ್ದವು. ಈಗ ತಾನು ಹಾಕಿದ ಬಂಡವಾಳವೂ ಬಂದಿದೆ. ನಾವು ಹೊಲಕ್ಕೆ ಹಾಕಿದ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಅವರು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು. ಅಲ್ಲದೆ, ತಾವು ಅಕ್ಕಪಕ್ಕ ಜಮೀನಿನ ಇತರೆ ರೈತರಿಗೆ ಇದೇ ರೀತಿ ಕೊರೋನಾ ರೋಗವು ಹರಡದಂತೆ ಮೂಲ ರಕ್ಷಣಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸುತ್ತಿದ್ದಾರೆ.

error: Content is protected !!