ಬೆಂಗಳೂರು, ಅ.01: ಶಿವಮೊಗ್ಗ ಭೇಟಿಯ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರು ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದು, ಬೆಳೆಗಾರರಿಗೆ ವಿಶೇಷ ಗುರುತಿನ ಚೀಟಿ ಮತ್ತು ಸಾರಿಗೆ ವೆಚ್ಚ ನೀಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.
ಅವರು ವಿಕಾಸ ಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶಿವಮೊಗ್ಗ ಭೇಟಿ ಸಂದರ್ಭದಲ್ಲಿ ರೇಷ್ಮೆ ಬೆಳಗಾರರೊಂದಿಗೆ ನಡೆಸಿದ ಸಂವಾದದ ವೇಳೆ ಹಲವು ಅಂಶಗಳನ್ನು ರೈತರು ಪ್ರಸ್ತಾಪಿಸಿದ್ದಾರೆ. ರೈತರು ರೇಷ್ಮೆಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಕೀಟದಿಂದ ಸಮಸ್ಯೆ ಆಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದನ್ನು ನಿವಾರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರೇಷ್ಮೆ ಇಲಾಖೆಯ ಆಯುಕ್ತ ಪೆದ್ದಪ್ಪಯ್ಯ ಅವರಿಗೆ ಸಚಿವರು ಸೂಚನೆ ನೀಡಿದರು.
ಶಿವಮೊಗ್ಗ ಹಾಗೂ ದಾವಣೆಗೆರೆ ಭಾಗದ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡನ್ನು ಮಾರುಕಟ್ಟೆಗೆ ಸಾಗಿಸುವಾಗ ಪೊಲೀಸರು ಹಾಗೂ ದಲ್ಲಾಳಿಗಳಿಂದ ಕಿರಿಕಿರಿ ಆಗುತ್ತಿದೆ. ವಿನಾಕಾರಣ ತಪಾಸಣೆ ನೆಪದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಂದ ಮುಕ್ತಿ ನೀಡಿ ಎಂದು ರೈತರು ನಿನ್ನೆ ಶಿವಮೊಗ್ಗದಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಐಡಿ ಕಾರ್ಡ್ ನೀಡುವ ಭರವಸೆ ಕೊಟ್ಟಿದ್ದ ಸಚಿವರು, ಇಂದು ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ತಕ್ಷಣ ವಿಶೇಷ ಗುರುತಿನ ಚೀಟಿ ಮಾಡಿ ರೈತರಿಗೆ ನೀಡಬೇಕು. ಮತ್ತೆ ಈ ವಿಚಾರದಲ್ಲಿ ದೂರು ಬರಬಾರದು. ಅಲ್ಲದೆ ಈ ಮೊದಲು ಶಿವಮೊಗ್ಗ, ದಾವಣಗೆರೆಯ ರೈತರು ಮಾರುಕಟ್ಟೆಗೆ ರೇಷ್ಮೆ ತಂದಾಗ ಪ್ರತಿ ಕೆ.ಜಿ.ಗೆ 10 ರೂಪಾಯಿ ಸಾರಿಗೆ ವೆಚ್ಚ ನೀಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ತಕ್ಷಣವೇ ಸಾರಿಗೆ ವೆಚ್ಚ ಪ್ರತಿ ಕೆ.ಜಿ. ಗೆ 10 ರೂ. ನೀಡುವುದನ್ನು ಪುನಾರಂಭಿಸಬೇಕು. ರೇಷ್ಮೆ ಇಲಾಖೆ ಆಯುಕ್ತರು ಈ ಬಗ್ಗೆ ಕ್ರಮ ವಹಿಸಿ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು.
ಖಾಸಗಿಯವರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಕೆ.ಎಸ್.ಐ.ಸಿ. ಮಾರ್ಕೇಟಿಂಗ್ ಮಾಡುವ ಕೆಲಸ ಆಗುತ್ತಿಲ್ಲ. ಮಾರುಕಟ್ಟೆ ನಿರ್ವಹಣೆಗೆ ಜವಾಬ್ದಾರಿ ವಹಿಸಿ ಒಬ್ಬರನ್ನು ನೇಮಿಸಬೇಕು. ಮಾರುಕಟ್ಟೆ ವಿಸ್ತರಣೆ ಆಗಬೇಕು. ಲಕ್ಷಾಂತರ ರೂಪಾಯಿ ಬೆಲೆಬಾಳುವ ರೇಷ್ಮೆ ಸೀರಿಯನ್ನು ಖರೀದಿಸಿದವರಿಗೆ, ಅತ್ಯುತ್ತಮವಾದ ಬ್ಯಾಗ್ ಅಥವಾ ಸೂಟ್ಕೇಸ್ನಲ್ಲಿ ಸೀರಿಯನ್ನು ಹಾಕಿ ಕೊಡಬೇಕು. ಗುಣಮಟ್ಟದ ಮತ್ತು ಆಕರ್ಷಕ ರೀತಿಯ ಮಾರ್ಕೇಟಿಂಗ್ ಅತಿ ಮುಖ್ಯ ಎಂದು ಹೇಳಿದರು. ಮಾರ್ಕೇಟಿಂಗ್ ಜೊತೆಗೆ ಹೊಸ ಹೊಸ ಡಿಸೈನ್ ಕೂಡ ಬರಬೇಕು. ಅದಕ್ಕಾಗಿ ಓರ್ವ ಡಿಸೈನರ್ ಅನ್ನು ನೇಮಿಸಿ ಅಥವಾ ಇಲಾಖೆಯಲ್ಲಿ ಇರುವವರಿಗೆ ಜವಾಬ್ದಾರಿ ನೀಡಬೇಕು. ಮೈಸೂರು ಸಿಲ್ಕ್ ಗೆ ಬೇಡಿಕೆ ಇದೆ. ಆದರೆ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿದೆ. ಎರಡು ಪಾಳಿಯಲ್ಲಿ ಕೆಲಸ ಮಾಡುವ ಮೂಲಕ, ಉತ್ಪಾದನೆಯನ್ನು ದ್ವಿಗುಣಗೊಳಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಯುನಿಯನ್ ಲೀಡರ್ಗಳ ಜೊತೆ ಸಭೆ ಕರೆದು ಚರ್ಚೆ ನಡೆಸಬೇಕು. ರೇಷ್ಮೆ ಸೀರೆ ಎಲ್ಲ ವರ್ಗದವರಿಗೆ ಸಿಗುವ ಹಾಗೆ ವಿವಿಧ ಗುಣಮಟ್ಟದಲ್ಲಿ ಸಿದ್ದಪಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೆ.ಎಸ್.ಐ.ಸಿ. ಅಧ್ಯಕ್ಷ ಎಸ್.ಆರ್. ಗೌಡ, ಕೆ.ಎಸ್.ಎಂ.ಬಿ. ಅಧ್ಯಕ್ಷೆ ಸಚಿತಾ, ಕೆ.ಎಸ್.ಎಂ.ಬಿ. ಎಂ.ಡಿ. ಕನಕವಲ್ಲಿ, ಇಲಾಖೆ ಆಯುಕ್ತ ಪೆದ್ದಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.