ಶಿವಮೊಗ್ಗ, ಜನವರಿ 30: ರಾಷ್ಟ್ರೀಯ ಕುಷ್ಟರೋಗ ಜಾಗೃತಿ ಆಂದೋಲನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ಅವರು ಬುಧವಾರ ಚಾಲನೆ ನೀಡಿದರು.
‘ರಾಷ್ಟ್ರೀಯ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ’ವು ಜನವರಿ 30ರಿಂದ ಫೆಬ್ರವರಿ 13ರ ವರೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಷ್ಠರೋಗ ನಿವಾರಣ ವಿಭಾಗದ ಅಡಿಯಲ್ಲಿ ನಡೆಯಲಿದೆ. ಈ ಪ್ರಯುಕ್ತ ಬುಧವಾರ ಬೆಳಗ್ಗೆ 9ಗಂಟೆಗೆ ಕೋರ್ಟ್ ಆವರಣದಿಂದ ಜಾಥ ಆರಂಭಗೊಂಡು ಮಹಾವೀರ್ ಸರ್ಕಲ್ ನಂತರ ಗೋಪಿ ಸರ್ಕಲ್ನಿಂದ ಸಾಗಿ ಐ.ಎಮ್.ಎ ಹಾಲ್ನಲ್ಲಿ ಕೊನೆಗೊಂಡಿತು. ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಾಥದಲ್ಲಿ ಪಾಲ್ಗೊಂಡಿದ್ದರು.
ಕುಷ್ಠರೋಗದ ಬಗೆಗಿನ ತಪ್ಪು ತಿಳುವಳಿಕೆ, ರೋಗದ ಲಕ್ಷಣಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಉಚಿತ ಚಿಕಿತ್ಸೆ ಹಾಗೂ ಸಹಾಯವಾಣಿಯ ಕುರಿತಾದ ಮಾಹಿತಿಗಳನ್ನೊಳಗೊಂಡ ಫಲಕಗಳು ಹಾಗೂ ಮಾಹಿತಿ ಪ್ರಸಾರಿಸುತ್ತ ಜಾಥ ಸಾಗಿತು. ಕುಷ್ಠ ರೋಗದ ಬಗ್ಗೆ ಜನರು ತಿಳುವಳಿಕೆ ಹೊಂದಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದಲ್ಲಿ ಭಾರತ ಕುಷ್ಠರೋಗ ಮುಕ್ತವಾಗಲಿದೆ. ಕುಷ್ಠರೋಗ ಅನುವಂಶೀಯ ಕಾಯಿಲೆಯಲ್ಲ. ಇದು ಶಾಪಗಳಿಂದ ಬರುವ ಕಾಯಿಲೆಯಲ್ಲ. ಇದರ ಬಗ್ಗೆ ಜನರಲ್ಲಿನ ಮೂಡನಂಬಿಕೆ ತೊಲಗ ಬೇಕಿದೆ. ತಾಮ್ರದ ಬಣ್ಣದ ರೋಮ ರಹಿತ ಸ್ಪರ್ಶ ಜ್ಞಾನವಿರದ ಮಚ್ಚೆಗಳು ಕುಷ್ಠ ರೋಗದ ಲಕ್ಷಣಗಳಾಗಿರಬಹುದು. ಈ ಬಗ್ಗೆ ಯಾವುದೇ ಸಂದೇಹವಿದ್ದರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸಲಹೆ ಮತ್ತು ಚಿಕಿತ್ಸೆ ಲಭ್ಯವಿರುತ್ತದೆ. ಕುಷ್ಠರೋಗದ ಬಗ್ಗೆ ಇರುವ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ದಿನದ ಇಪ್ಪತ್ನಾಲ್ಕು ಗಂಟೆಗಳು ತೆರೆದಿರುವ ಸಹಾಯವಾಣಿ 104ನ್ನು ಬಳಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸಲಾಯಿತು.
ಜಿಲ್ಲಾಧಿಕಾರಿ ದಯಾನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ. ಸಿ. ಬಾದಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಶಿವರಾಮೆಗೌಡ, ವಕೀಲರ ಸಂಘದ ಅಧ್ಯಕ್ಷ ಜೆ.ಎಂ. ಮಧು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಮೆಗ್ಗಾನ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ರಘುನಂದನ್ ಹಾಗೂ ಜಿಲ್ಲಾ ಕಾರ್ಯಕ್ರಮ ಅನುಷ್ಠನಾಧಿಕಾರಿ ಡಾ. ಶಮಾ ಬೇಗಂ ಫಕೃದ್ಧೀನ್ ಜಾಥಾದಲ್ಲಿ ಪಾಲೊಂಡಿದ್ದರು.