ಶಿವಮೊಗ್ಗ, ನವೆಂಬರ್ 09, : ಕಾನೂನಿನ ಅಜ್ಞಾನದಿಂದ ಶೇ.75 ಪ್ರಕರಣಗಳು ದಾಖಲಾದರೆ ಶೇ.25 ದ್ವೇಷ ಮನೋಭಾವದಿಂದ ದಾಖಲಾಗುತ್ತವೆ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಹೊಂದುವುದು ಹಾಗೂ ಪ್ರೀತಿ-ವಿಶ್ವಾಸದಿಂದ ಬದುಕುವುದು ಅತ್ಯವಶ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಐಕ್ಯುಎಸಿ, ಜಿಲ್ಲಾ ನ್ಯಾಯವಾದಿಗಳ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಎಟಿನ್‍ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯ ನಾವು ಕಾನೂನನ್ನು ಪಾಲಿಸಬೇಕು ಕಾನೂನಿನ ಅರಿವು ಮತ್ತು ಜ್ಞಾನದಿಂದ ನಾವು ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ದಾಖಲಾತಿಗಳಾದ ಜನ್ಮ ದಿನಾಂಕ, ಜಾತಿ, ಪ್ರವರ್ಗ ಇತರೆ ದಾಖಲಾತಿಗಳನ್ನು ಈಗಲೇ ಪರಿಶೀಲಿಸಿಕೊಳ್ಳಬೇಕು. ಎಸ್‍ಎಸ್‍ಎಲ್‍ಸಿ ಆದ ನಂತರ ದಾಖಲಾತಿಗಳಲ್ಲಿ ದೋಷ ಕಂಡುಬಂದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಡಿಕ್ರಿ ಪಡೆಯಬೇಕಾಗುತ್ತದೆ. ಆದ್ದರಿಂದ ಈಗಲೇ ಪರಿಶೀಲಿಸಿಕೊಳ್ಳಬೇಕು. ವಾಹನ ಚಾಲನ ಪರವಾನಗಿ ಪಡೆದುಕೊಂಡು, ವಿಮೆಯನ್ನು ಮಾಡಿಸಿದ ನಂತರ ವಾಹನ ಚಾಲನೆ ಮಾಡಬೇಕು.
ಸಿವಿಲ್ ಪ್ರಕರಣಗಳನ್ನು ವರ್ಷಾನುಗಟ್ಟಲೆ ನಡೆಸಲಾಗುತ್ತದೆ, ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಿತಸ್ಥರಲ್ಲದವರಿಗೆ ಶಿಕ್ಷೆಯಾಗುತ್ತದೆಂಬ ಅಪವಾದ ನ್ಯಾಯಾಲಗಳಿಗಿದೆ. ಆದರೆ ಕಾನೂನು ರಚಿಸುವುದು ಜನಪ್ರತಿನಿಧಿಗಳು, ನ್ಯಾಯಾಲಯಗಳು ಅವನ್ನು ಜಾರಿಗೊಳಿಸುತ್ತವಷ್ಟೆ. ಆದ್ದರಿಂದ ಉತ್ತಮ ನಾಯಕರನ್ನು ಆರಿಸಬೇಕು.
ನ್ಯಾಯ ವಿಳಂಬಕ್ಕೆ ಮುಖ್ಯ ಕಾರಣ ನಮ್ಮ ಕಾನೂನು. ಬ್ರಿಟಿಷ್ ಕಾಲದ ಕಾನೂನುಗಳೇ ಇನ್ನೂ ಜಾರಿಯಲ್ಲಿವೆ. 1860ರ ಐಪಿಸಿ, 1872 ರ ಎವಿಡೆನ್ಸ್ ಕಾಯ್ದೆ ಇತರೆ. ನಮಗೆ ನಮ್ಮದೇ ನೆಲದ, ಸಂಸ್ಕøತಿಯ ಕಾನೂನು ಬೇಕು. ಪ್ರಸ್ತುತ ಸರ್ಕಾರ ಇದನ್ನು ಮನವರಿಕೆ ಮಾಡಿಕೊಂಡು ಹೊಸ ಕಾನೂನುಗಳನ್ನು ರಚಿಸಿ ಲೋಕಸಭೆಗೆ ಮಂಡಿಸಿದೆ. ಚರ್ಚೆ ನಂತರ ಜಾರಿಗೆ ಬರುವುದು ಎಂದರು.
1945 ರ ನ.9 ರಂದು ರಚನೆಯಾದ ಕಾನೂನು ಸೇವಾ ಸಮಿತಿ ಸ್ಮರಣಾರ್ಥ ನ.09 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಆಚರಿಸಲಾಗುತ್ತಿದೆ. ಸಂಕಷ್ಟದಲ್ಲಿರುವವರು, ದುರ್ಬಲರು, ಅಗತ್ಯವಿರುವವರೆಲ್ಲ ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯಗಳನ್ನು ಪಡೆಯಬೇಕೆಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದನ್ ಸಿ.ಎನ್ ಮಾತನಾಡಿ, ವಾಸ್ತವಾಂಶಗಳ ಅಜ್ಞಾನಕ್ಕೆ ಕ್ಷಮೆ ಇದೆ. ಆದರೆ ಕಾನೂನಿನ ಕುರಿತಾದ ಅಜ್ಞಾನಕ್ಕೆ ಕ್ಷಮೆ ಇಲ್ಲ. ಆದ್ದರಿಂದ ಎಲ್ಲರೂ ಈ ನೆಲದ ಕಾನೂನನ್ನು ತಿಳಿದುಕೊಳ್ಳಬೇಕು. ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಳ್ಳಿಗಳಲ್ಲಿ, ಸಮುದಾಯಗಳು, ಶಾಲಾ-ಕಾಲೇಜುಗಳಲ್ಲಿ ಅನೇಕ ಕಾನೂನು ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಭ್ರೂಣದಿಂದ ಹಿಡಿದು ಸಾವಿನ ನಂತರವೂ ನಮಗೆಲ್ಲ ಕಾನೂನುಗಳು ಅನ್ವಯವಾಗುತ್ತವೆ. ಆದ್ದರಿಂದ ಎಲ್ಲರೂ ಕಾನೂನನ್ನು ತಿಳಿದಿರಲೇಬೇಕು. ವಿದ್ಯಾರ್ಥಿಗಳಾದ ನೀವು ಕಾನೂನಿನ ಅರಿವನ್ನು ಪರಿಣಾಮಕಾರಿಯಾಗಿ ಸುತ್ತಮುತ್ತಲಿನವರಿಗೆ ತಿಳಿಸಬಹುದಾಗಿದ್ದು ಕಾನೂನಿನ ಅರಿವನ್ನು ಹರಡುವ ವೈರಸ್‍ಗಳಾಗಬೇಕು. ಕಾಯ್ದೆಗಳನ್ನು ಜನರಿಗೆ ತಲುಪಿಸುವಲ್ಲಿ ವ್ಯವಸ್ಥೆ ಮತ್ತು ಜನರ ನಡುವಿನ ಸೇತುವೆಯಾಗಬೇಕು.
ಕಾನೂನು ಸೇವಾ ಪ್ರಾಧಿಕಾರವು ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ನೀಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಹಿಳಾ ಮತ್ತು ಮಕ್ಕಳು, ಭಿಕ್ಷುಕರು, ಅಂಗವೈಫಲ್ಯ ಹೊಂದಿರುವವರು, ಬಾಲ ಅಪರಾಧಿಗಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ತುತ್ತಾದವರು, ವಾರ್ಷಿಕ ಆದಾಯ 3 ಲಕ್ಷಗಳಿಗಿಂತ ಕಡಿಮೆ ಇರುವ ಎಲ್ಲಾ ವರ್ಗದ ನಾಗರೀಕರು ಉಚಿತವಾದ ಕಾನೂನಿನ ಸಲಹೆ ಮತ್ತು ನೆರವನ್ನು ಹಾಗೂ ಆಸಿಡ್ ದಾಳಿಗೆ ಒಳಗಾದ ವ್ಯಕ್ತಿಗಳು ಮತ್ತು ಇನ್ನಿತರೆ ಗಲಭೆಗಳಿಂದ ನೊಂದ ಸಂತ್ರಸ್ಥರು ಪರಿಹಾರ ಪಡೆಯಲು ಅರ್ಹರಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ/ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಕಡೆಯಿಂದ ಮಾಹಿತಿಯನ್ನು ಪಡೆದು ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಎಟಿಎನ್‍ಸಿಸಿ ಕಾಲೇಜಿನ ಪ್ರಾಂಶುಪಾಲರಾದ ಮಮತ ಪಿ ಆರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ದಾಖಲಾತಿಗಳನ್ನು ಸರಿಯಾಗಿರಿಸಿಕೊಳ್ಳಬೇಕು. ಎಲ್ಲಿ ಏನು ಮಾಡಬೇಕು ಮತ್ತು ಮಾಡಬಾರದೆಂಬ ಜ್ಞಾನವಿರಬೇಕು. ವಾಹನ ಚಾಲನ ಪರವಾನಗಿ, ವಿಮೆ, ಎಮಿಷನ್ ಪರೀಕ್ಷಾ ವರದಿ ಇಟ್ಟುಕೊಳ್ಳಬೇಕು. ಕಾನೂನನ್ನು ಎಂದಿಗೂ ಕೈಗೆ ತೆಗೆದುಕೊಳ್ಳಬಾರದು. ಎಲ್ಲರನ್ನೂ ಪ್ರೀತಿ, ಗೌರವದಿಂದ ಕಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕೆಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಜಗದೀಶ್, ಕಾಲೇಜಿನ ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ ನಾಗರಾಜು, ಇಂಗ್ಲಿಷ್ ಉಪನ್ಯಾಸಕ ಅಂಜನ್, ವಾರ್ತಾ ಸಹಾಯಕರಾದ ಭಾಗ್ಯ ಎಂ.ಟಿ ಉಪಸ್ಥಿತರಿದ್ದರು.

error: Content is protected !!