ಹರ್ಯಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಕುಸ್ತಿಪಟುಗಳು ಭಾಗಿ
ಸಾಗರದ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಆಯೋಜನೆ
ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರಾ ಪ್ರಯುಕ್ತ ಸಮಿತಿ ವತಿಯಿಂದ ಆಯೋಜಿಸಿರುವ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ನಡೆಯಲಿದೆ.
ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯದ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದು, ನುರಿತ ತೀರ್ಪುಗಾರರ ನೇತೃತ್ವದಲ್ಲಿ ಘಟಾನುಘಟಿಗಳ ಕುಸ್ತಿ ಪಂದ್ಯಗಳು ನಡೆಯಲಿವೆ. ಮೊದಲ ದಿನವೇ ನೂರಾರು ಕುಸ್ತಿಪಟುಗಳು ಭಾಗವಹಿಸಿದ್ದರು. ಮೊದಲ ದಿನದ ಪಂದ್ಯಗಳು ರೋಚಕ ಹಣಾಹಣಿಯಿಂದ ನಡೆದವು.
ಫೆ. 10ರಿಂದ ಕುಸ್ತಿ ಪಂದ್ಯಾವಳಿ ಆರಂಭವಾಗಿದ್ದು, ಶನಿವಾರ ಹಾಗೂ ಭಾನುವಾರ ಸಹ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಕುಸ್ತಿಪಟುಗಳ ಪಂದ್ಯಗಳು ನಡೆಯಲಿವೆ. ಎರಡು ದಿನ ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೂ ಕುಸ್ತಿ ಪಂದ್ಯಗಳು ನಡೆಯಲಿವೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ ಕುಸ್ತಿಪಟುಗಳಿಗೆ ಜಾತ್ರಾ ಸಮಿತಿ ವತಿಯಿಂದ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿದ್ದ ಕುಸ್ತಿಪಟುಗಳು ಆಗಮಿಸಿದ್ದರು. ಮಹಾರಾಷ್ಟ್ರದ ರಾಮ್, ಓಮಾಂಕ್ಷ್, ಹರ್ಯಾಣದ ಬಂಟಿ, ತೇಜು ಸೇರಿದಂತೆ ವಿವಿಧ ಕುಸ್ತಿಪಟುಗಳು ಆಗಮಿಸಿದ್ದರು.
ಮೊದಲ ದಿನದಂದು ಶಿಕಾರಿಪುರದ ರಾಘು, ಚಂದ್ರು, ದಾವಣಗೆರೆ ರಾಕಿ, ಲಕ್ಷ್ಮಣ್ ಬೊಮ್ಮನಕಟ್ಟೆ, ಮಧು ಭದ್ರಾವತಿ, ಶಿವಮೊಗ್ಗ ವಿನಯ ಭಗತ್ ಸೇರಿದಂತೆ ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಕುಸ್ತಿಪಟುಗಳು ಭಾಗವಹಿಸಿದ್ದರು.
ವಿಜೇತರಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿದಂತೆ ವಿಶೇಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತಿದೆ. ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಕುಸ್ತಿ ಸಂಚಾಲಕರಾಗಿ ಎಸ್.ಅಶೋಕ್, ಸಹಸಂಚಾಲಕರಾಗಿ ಎಂ.ಎಸ್.ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಗರದ ಮಾರಿಕಾಂಬ ಜಾತ್ರೆ ವೇಳೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಮೊದಲ ದಿನವೇ ಸಾವಿರಾರು ಜನರು ಆಗಮಿಸಿದ್ದರು. ರಾಜ್ಯದ ವಿವಿಧ ಕಡೆಯಿಂದ ಕುಸ್ತಿ ಪ್ರೇಮಿಗಳು ಆಗಮಿಸಿದ್ದರು.
ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ಕುಸ್ತಿಪಟುಗಳಿಗೆ ಬೆಳ್ಳಿ ಬಹುಮಾನ ಹಾಗೂ ವಿಶೇಷ ನಗದು ಬಹುಮಾನ ನೀಡಲಾಗುತ್ತಿದೆ. 200 ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿ ಗದೆ ಪಂದ್ಯಗಳು ನಡೆಯಲಿವೆ. ಒಂದು ಸಾವಿರ ರೂ. 25-50 ಸಾವಿರ ರೂ.ವರೆಗಿನ ಪಂದ್ಯಗಳು ನಡೆಯಲಿವೆ.
ಸಾಗರದ ಶ್ರೀ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ಆಯೋಜಿಸುವ ಕುಸ್ತಿ ಪಂದ್ಯಾವಳಿಗೆ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಆಗಮಿಸಿದ್ದಾರೆ. ಮೂರು ದಿನಗಳ ಕುಸ್ತಿ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಲು ಜಾತ್ರಾ ಸಮಿತಿ ಅಗತ್ಯ ವ್ಯವಸ್ಥೆ ಕಲ್ಪಿಸಿರುವುದು ಅಭಿನಂದನೀಯ.
| ಕೆ.ಎನ್.ಗುರುಮೂರ್ತಿ, ಎಂಎಡಿಬಿ ಅಧ್ಯಕ್ಷರು
- ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರಾ ಪ್ರಯುಕ್ತ ಸಮಿತಿ ವತಿಯಿಂದ ಆಯೋಜಿಸಿರುವ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
- ಮಹಾರಾಷ್ಟ್ರದ ರಾಮ್ ಅಖಾಡದ ಸುತ್ತ ಪಂಥಾಹ್ವಾನ ನೀಡುತ್ತಿರುವುದು
- ಕುಸ್ತಿ ಪಂದ್ಯಾವಳಿಯ ದೃಶ್ಯ
- ಶಿಕಾರಿಪುರದ ಚಂದ್ರು ಅವರಿಗೆ ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ವತಿಯಿಂದ ಪ್ರಶಸ್ತಿ ಪತ್ರ ನೀಡುತ್ತಿರುವುದು.
ಎಂಎಡಿಬಿ ಅಧ್ಯಕ್ಷರಿಂದ ಪಂದ್ಯಾವಳಿಗೆ ಚಾಲನೆ
ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರಾ ಪ್ರಯುಕ್ತ ಸಮಿತಿ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎನ್.ಗುರುಮೂರ್ತಿ ಚಾಲನೆ ನೀಡಿದರು.
ಶಿಕಾರಿಪುರದ ಚಂದ್ರು ಹಾಗೂ ದಾವಣಗೆರೆ ನಡುವಿನ ಪಂದ್ಯದಲ್ಲಿ ಚಂದ್ರು ವಿಜಯಶಾಲಿಯಾಗಿ 3,000 ರೂ. ನಗದು ಬಹುಮಾನ ವಿಜೇತರಾದರು. ಶಿವಮೊಗ್ಗದ ವಿನಯ್ ಭಗತ್ ಹಾಗೂ ಭದ್ರಾವತಿಯ ಮಧು ನಡುವೆ ಹಣಾಹಣಿ ನಡೆಯಿತು. ಮಹಾರಾಷ್ಟ್ರದ ಓಮಾಕ್ಷ್, ಹರ್ಯಾಣ ಬಂಟಿ, ಮಹಾರಾಷ್ಟ್ರದ ರಾಮ್ ಕುಸ್ತಿಪಟುಗಳು ಭಾಗವಹಿಸಿದ್ದರು.
ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್ಸಿಂಗ್, ಕುಸ್ತಿ ಸಂಚಾಲಕ ಎಸ್.ಅಶೋಕ್, ಸಹಸಂಚಾಲಕ ಎಂ.ಎಸ್.ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ, ಸುದರ್ಶನ್ ಭಂಡಾರಿ, ದೇವೆಂದ್ರಪ್ಪ, ಅಶೋಕ್, ಸಿದ್ದಪ್ಪ, ತೀರ್ಪುಗಾರರು ಹಾಗೂ ಕುಸ್ತಿಪಟುಗಳು ಹಾಜರಿದ್ದರು.
ಕಲಾಸಿರಿ ಕಾರ್ಯಕ್ರಮ ಫೆ. 11
ಜೀ ಕನ್ನಡ ಗಾಯಕರು ಭಾಗಿ
ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರಸಭೆ ಆವರಣದ ಮಾರಿಕಾಂಬಾ ಕಲಾವೇದಿಕೆಯಲ್ಲಿ ಫೆ. 11ರ ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಫೆ. 11ರ ಸಂಜೆ 5.30ರಿಂದ 6ರವರೆಗೆ ಸಾಗರ ಮಾರಿಕಾಂಬಾ ಸ್ವರ ಶೃಂಗಾರ ಚಂಡೆ ಬಳಗದ ವತಿಯಿಂದ ಚಂಡೆ ವಾದನ, ಸಂಜೆ 6ರಿಂದ 6.45ರವರೆಗೆ ಶಿವಮೊಗ್ಗ ಮಯೂರಿ ನೃತ್ಯ ಕಲಾಕೇಂದ್ರದ ವತಿಯಿಂದ ಭರತನಾಟ್ಯ, 7.30ರವರೆಗೆ ಮಂಗಳೂರು ಖ್ಯಾತ ಸಿತಾರ್ ವಾದಕ ಕೊಚ್ಚಿಕಾರ್ ದೇವದಾಸ್ ಪೈ ಅವರಿಂದ ಸೀತಾರ್ ವಾದನ, ರಾತ್ರಿ 7.30ರಿಂದ 8.15 ರವರೆಗೆ ಸಾಗರ ಶ್ರೀಧರ್ ಅವರಿಂದ ಸ್ಯಾಕ್ಸೋಫೋನ್ ವಾದನ, 8.15 ರಿಂದ 9.30ರವರೆಗೆ ಬೆಂಗಳೂರು ಲಯಾರ್ಣವ ತಂಡದಿಂದ ವಿವಿಧ ವಾದ್ಯಗಳ ಫ್ಯೂಜನ್ ಕಾರ್ಯಕ್ರಮ, ನಂತರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಜೀಕನ್ನಡ ಮೆಂಟರ್ ಸುಚೇತನ್ ಸಾರಥ್ಯದಲ್ಲಿ ಹರ್ಷರಂಜಿನಿ, ಸುಪ್ರೀತ್, ಪೃಥ್ವಿ ಭಟ್, ಶಿವಾನಿ, ಶ್ರೀನಿಧಿಶಾಸ್ತ್ರಿ , ಚನ್ನಪ್ಪ ಪಾಲ್ಗೊಳ್ಳುವರು.