ಶಿವಮೊಗ್ಗ ಜುಲೈ 20 : ಶಿವಮೊಗ್ಗ ಜಿಲ್ಲೆಯಲ್ಲಿ 2022 ರ ಮುಂಗಾರು ಹಂಗಾಮಿನಲ್ಲಿ ಕಳೆದ ಒಂದು ವಾರದಲ್ಲಿ ಸರಾಸರಿ 183 ಮಿ.ಮೀ. ವಾಡಿಕೆ ಮಳೆಗೆ 288 ಮಿ.ಮೀ ಮಳೆಯಾಗಿದ್ದು ಶೇಕಡ 58 ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಪ್ರಸ್ತುತ ವಾತಾವರಣದಲ್ಲಿ ಗೊಬ್ಬರ ಬಳಕೆ ಕುರಿತು ಕೃಷಿ ಇಲಾಖೆಯಿಂದ ಕೆಳಕಂಡಂತೆ ಸಲಹೆ ನೀಡಲಾಗಿದೆ.
ವಿವಿಧ ಹಂತದಲ್ಲಿರುವ ಮೆಕ್ಕೆಜೋಳ ಬೆಳೆಗೆ ರೈತರಿಗೆ ಸಕಾಲದಲ್ಲಿ ಅಂತರ ಬೇಸಾಯ ಮತ್ತು ಯೂರಿಯಾ ಮೇಲುಗೊಬ್ಬರ ನೀಡಲು ಸಾಧ್ಯವಾಗಿರುವುದಿಲ್ಲ. ಈ ದಿನ ಮಳೆಯ ಪ್ರಮಾಣ ತಗ್ಗಿದ್ದು ಬಿಸಿಲಿನ ವಾತಾವರಣದಿಂದ ಕೂಡಿದ್ದು, ಮೆಕ್ಕೆಜೋಳ ಬೆಳೆಗೆ ಅಂತರ ಬೇಸಾಯವನ್ನು ಮತ್ತು ಕಳೆ ತೆಗೆಯುವ ಕೆಲಸವನ್ನು ಕೈಗೊಂಡು ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಪ್ರತಿ ಎಕರೆಗೆ 65 ಕೆ.ಜಿ.ಯಂತೆ ಬಳಕೆಮಾಡುವುದು. ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ರೋಗ ಮತ್ತು ಕೀಟ ಬಾಧೆ ಹೆಚ್ಚಾಗುತ್ತದೆ.
ಯೂರಿಯಾ ರಸಗೊಬ್ಬರ ಜೊತೆಗೆ ಬಿಸಿಲಿನ ವಾತಾವರಣ ಮುಂದುವರೆದಲ್ಲಿ ನೀರಿನಲ್ಲಿ ಕರಗುವ 19:19:19 ರಸಗೊಬ್ಬರವನ್ನು ಪ್ರತಿ ಎಕರೆಗೆ 1 ಕೆ.ಜಿ.ಯಷ್ಟು 200 ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. 25 ರಿಂದ 30 ದಿನಗಳ ಬೆಳೆಗೆ ಮತ್ತು ಹೂವಾಡುವ ಹಂತದಲ್ಲಿ ನ್ಯಾನೊ ಯೂರಿಯಾ ದ್ರವವನ್ನು ಪ್ರತಿ ಲೀಟರ್ ನೀರಿಗೆ
4 ಮಿ.ಲೀ.ನಂತೆ ಮತ್ತು 8 ಗ್ರಾಂ ನೀರಿನಲ್ಲಿ ಕರಗುವ ಪೆÇಟ್ಯಾಶ್ ಅನ್ನು ಸಿಂಪರಣೆ ಮಾಡುವುದರಿಂದ ಗಿಡಗಳು ಬೇಗನೆ ಚೇತರಿಸಿಕೊಳ್ಳುತ್ತವೆ, ಯೂರಿಯಾ ರಸಗೊಬ್ಬರವನ್ನು ಮಿತವಾಗಿ ಬಳಕೆ ಮಾಡಲು ರೈತರಿಗೆ ಜಂಟಿ ಕೃಷಿ ನಿರ್ದೇಶಕರು ಕೋರಿರುತ್ತಾರೆ.
ಜಿಲ್ಲೆಗೆ ಬೇಡಿಕೆಗೆ ಅನುಗುಣವಾಗಿ ಯೂರಿಯ ಮತ್ತು ಇತರೆ ರಸಗೊಬ್ಬರಗಳು ಜಿಲ್ಲೆಗೆ ಪೂರೈಕೆಯಾಗುತ್ತಿದ್ದು, ಚಿಲ್ಲರೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗಳ ಮೂಲಕ ಪ್ರತಿ ದಿನ ರೈತರಿಗೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರ ಕೊರತೆ ಇರುವುದಿಲ್ಲ, ಆದ್ದರಿಂದ ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ರಸಗೊಬ್ಬರವನ್ನು ನಿಗದಿಪಡಿಸಿದ ದರ ನೀಡಿ ಮತ್ತು ಅಧಿಕೃತ ಬಿಲ್ಲಗಳನ್ನು ಪಡೆಯಲು ರೈತರಿಗೆ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ.
ಜಿಲ್ಲೆಗೆ ಸರಬಾರಾಜು ಆಗುವ ರಸಗೊಬ್ಬರವು ಜಿಲ್ಲೆಯ ರೈತರಿಗೆ ಸಿಗಬೇಕು ಹಾಗೂ ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ಮತ್ತು ಕೃತಕ ಅಭಾವ ಸೃಷ್ಟಿಸುವ ಪರಿಕರ ಮಾರಾಟ ಮಳಿಗೆಗಳ ಪರವಾನಿಗೆಯನ್ನು ರದ್ದು ಮಾಡಿ ಸೂಕ್ತ ಕಾನೂನತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.