ಶಿವಮೊಗ್ಗ, ಜೂನ್ 01 : ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು, ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಟ ಕೃಷಿ ಉತ್ಪಾದನೆಯನ್ನು ಪಡೆಯುವ ಸದುದ್ದೇಶದಿಂದ ರಾಜ್ಯ ಸರ್ಕಾರವು ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಪಶುಸಂಗೋಪನೆ, ರೇಷ್ಮೇ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದ ಅವರು, ಕೃಷಿ ವಲಯದ ಪ್ರಸ್ತುತ ಮನಸ್ಥಿತಿಯನ್ನು ಮನಗಂಡು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸಲು, ಏಕಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು, ವಿವಿಧ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿಗಾಗಿಯೂ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದವರು ನುಡಿದರು.
ಈಗಾಗಲೇ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಜೂನ್ 20ರೊಳಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮಗ್ರ ಕೃಷಿ ಅಭಿಯಾನದ ಮೂಲಕ ರೈತರಲ್ಲಿ ಕೃಷಿಯ ಕುರಿತು ಅರಿವು ಮೂಡಿಸಲಾಗುವುದು. ಇದೇ ಸಂದರ್ಭದಲ್ಲಿ ಉತ್ಪಾದಕತೆ ಹೆಚ್ಚಿಸುವ ತಂತ್ರಜ್ಞಾನವನ್ನು ಪರಿಚಯಿಸುವುದರೊಂದಿಗೆ ವಿಜ್ಞಾನಿಗಳು ಹಾಗೂ ರೈತರೊಂದಿಗೆ ಸಂವಾದಗಳನ್ನು ಏರ್ಪಡಿಸಲಾಗುವುದು ಎಂದವರು ನುಡಿದರು.
ಈ ಕಾರ್ಯಕ್ರಮಗಳಿಗೆ ಕೃಷಿ ಕ್ಷೇತ್ರದ ಸಾಧಕರು, ಪ್ರಗತಿಪರ ರೈತರು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳನ್ನು ಆಹ್ವಾನಿಸಬೇಕೆಂದ ಅವರು, ಈ ಕಾರ್ಯಕ್ರಮದಿಂದಾಗಿ ಸಣ್ಣ ಹಿಡುವಳಿದಾರರ ನೆಮ್ಮದಿಯ ಬದುಕಿಗೆ ಭರವಸೆ ಮೂಡುವಂತಾಗಬೇಕೆಂದವರು ನುಡಿದರು.
ಕಡಿಮೆ ಭೂಮಿ ಮತ್ತು ಇರುವ ಸಂಪನ್ಮೂಲವನ್ನು ಬಳಸಿಕೊಂಡು ಕೃಷಿ ಕ್ಷೇತ್ರದ ಸಾಧನೆ ಮಾಡಿರುವವರನ್ನು ಪರಿಚಯಿಸಬೇಕು. ಇದರಿಂದಾಗಿ ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವವರನ್ನು ತಡೆದು ಕೃಷಿ ಕ್ಷೇತ್ರದತ್ತ ಆಕರ್ಷಿಸುವಂತಾಗಬೇಕೆಂದವರು ನುಡಿದರು.
ಈ ಕಾರ್ಯಕ್ರಮವು ನಿರುದ್ಯೋಗಿ ಯುವ ಜನಾಂಗವನ್ನು ಕೇಂದ್ರೀಕರೀಸಿಕೊಂಡು ರೂಪಿತಗೊಳ್ಳುವಂತೆ ಆಯೋಜಕರು ಗಮನಹರಿಸಬೇಕು. ಇದರಿಂದಾಗಿ ಗ್ರಾಮೀಣ ಯುವ ಜನತೆ ಕೃಷಿ ಕ್ಷೇತ್ರದತ್ತ ಮುಖಮಾಡುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಅಗತ್ಯವಿದ್ದಲ್ಲಿ ಅವರೊಂದಿಗೆ ತಜ್ಞರ ಸಮಾಲೋಚನೆಗಳು ನಡೆಯಲು ಅವಕಾಶ ಕಲ್ಪಿಸಿ, ಸೂಕ್ತ ಮಾರ್ಗದರ್ಶನ ನೀಡುವುದಲ್ಲದೆ ಅವರ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಬೇಕೆಂದವರು ನುಡಿದರು.
ಕೃಷಿಯೂ ಕೂಡ ಲಾಭದಾಯಕ ಉದ್ಯಮ ಎಂಬುದನ್ನು ಯುವಕರಿಗೆ ತಿಳಿಸಲು ಕಾಲೇಜು ಹಂತದಲ್ಲಿ ವಿಚಾರ ಸಂಕಿರಣ ಹಾಗೂ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುವಂತೆ ಸಲಹೆ ನೀಡಿದ ಅವರು, ಈ ಎಲ್ಲಾ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಂಬಂಧಿತ ಇಲಾಖೆಗಳ ಎಲ್ಲಾ ಹಂತದ ಅಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಉಪವಿಭಾಗಾಧಿಕಾರಿ ಪ್ರಕಾಶ್ ಮತ್ತು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್‍ಕುಮಾರ್, ತೋಟಗಾರಿಕೆ ಉಪನಿರ್ದೇಶಕ ಡಾ.ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಬೆಳೆ ವಿಮೆ ಕರಪತ್ರಗಳನ್ನು ಹಾಗೂ ಸಮಗ್ರ ಕೃಷಿ ಅಭಿಯಾನದ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.

error: Content is protected !!