ಶಿವಮೊಗ್ಗ, ಜೂನ್.26 : ಯುವಜನತೆ ಮಾದಕ ವ್ಯಸನಿಗಳಾಗದೆ ತಮ್ಮ ವ್ಯಕ್ತಿತ್ವವನ್ನು ಒಳ್ಳೆಯ ಮಾರ್ಗದಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಶೆ ಪ್ರಭಾವತಿ ಎಂ ಹಿರೇಮಠ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ಹಾಗೂ ಅಕ್ರಮ ಸಾಗಾಣೀಕೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾದಕ ವಸ್ತುಗಳ ವ್ಯಸನವೊಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ತಡೆದು ಹಾಕುವ ಕಾರ್ಯದಲ್ಲಿ ಜನತೆ ತೊಡಗಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಸಮಾಜದಲ್ಲಿ ಮಾದಕ ವಸ್ತುಗಳಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿರುವುದು ಯುವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಈ ಕಾರಣದಿಂದಾಗಿ ಎಲ್ಲಾ ಕಾಲೇಜುಗಳಲ್ಲೂ ಸಹ ಮಾದಕ ವಸ್ತುಗಳ ಕುರಿತಾದ ಜಾಗೃತಿಯನ್ನು ಶಿಕ್ಷಕರು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಮಾದಕವಸ್ತುಗಳ ವ್ಯಸನದಿಂದ ವ್ಯಕ್ತಿತ್ವ ಹಾಗೂ ಆರೋಗ್ಯ ನಾಶ ಹೊಂದುತ್ತದೆ ಮತ್ತು ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಮಾದಕವಸ್ತುಗಳು ಪ್ರೇರಣೆ ನೀಡುತ್ತವೆ. ಮಾದಕ ವ್ಯಸನಕ್ಕೆ ಹಣ ಹೊಂದಿಸುವ ಸಲುವಾಗಿ ಕಳ್ಳತನ ಇನ್ನಿತರ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಈ ಕುರಿತಾಗಿ ಪ್ರತಿಯೊಬ್ಬರು ಸಹ ಮಾದಕ ವ್ಯಸನಗಳ ತಡೆಗೆ ಕೈಜೋಡಿಸ ಬೇಕು ಎಂದು ಅವರು ಕರೆಕೊಟ್ಟರು.
ಮಾದಕ ವ್ಯಸನಗಳ ಕಳ್ಳ ಸಾಗಾಣಿಕೆಯ ಕೃತ್ಯಕ್ಕೆ ಮಹಿಳೆಯರಿಗೆ ಕಾನೂನಿನ ಸಡಿಲಿಕೆ ಇರುವುದನ್ನು ಚರ್ಚಿಸಿದ ಅವರು ಎಲ್ಲದರಲ್ಲೂ ಸಮಾನ ಸ್ಥಾನ ಪಡೆಯುವ ಪೈಪೋಟಿಯಲ್ಲಿರುವ ಮಹಿಳೆಯರಿಗೆ ಕಾನೂನು ಸಹ ಸಮಾನವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಎಂ ಅಶ್ವಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಧು, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯ ಡಾ. ಪ್ರಮೋದ್ ಹೆಚ್.ಎಲ್ ಅವರು ಉಪನ್ಯಾಸ ನೀಡಿದರು.

error: Content is protected !!