ಶಿವಮೊಗ್ಗ, ಸೆ.13: ಪಬ್ಜಿಯಂತಹ ಮೊಬೈಲ್ ಗೇಮ್ನಿಂದ ವಿದ್ಯಾರ್ಥಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೊಂದಿಗೆ ಕೌನ್ಸಿಲಿಂಗ್ ನಡೆಸಲು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಈ.ಕಾಂತೇಶ್ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಮೇಲೆ ಮೊಬೈಲ್ ಗೇಮ್ನಿಂದ ಆಗುವ ಮಾನಸಿಕ ಪರಿಣಾಮಗಳ ಕುರಿತು ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮೊಬೈಲ್ ಗೇಮ್ಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಮಾತ್ರವಲ್ಲದೆ, ಸಮಾಜಕ್ಕೂ ಮಾರಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಖಾಸಗಿ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗುವುದು. ಪ್ರಾರಂಭಿಕ ಹಂತದಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ತರಬೇತಿ ಆಯೋಜಿಸಲಾಗುವುದು ಎಂದರು.
ಮಾನಸಿಕ ತಜ್ಞ ಡಾ.ಪ್ರಮೋದ್ ಅವರು ಮಾತನಾಡಿ, ಮೊಬೈಲ್ ವ್ಯಸನ ಖಿನ್ನತೆಗೆ ದಾರಿ ಮಾಡುತ್ತದೆ. ಖಿನ್ನತೆ ಕಾರಣದಿಂದ ಪ್ರತಿ 40ಸೆಕೆಂಡಿಗೆ ಒಬ್ಬ ವಿಶ್ವದಲ್ಲಿ ಆತ್ಮಹತ್ಯೆ ಮಾಡುತ್ತಿದ್ದಾನೆ. ಮಕ್ಕಳಿಗೆ ಮೊಬೈಲ್ ಚಟ ಪೋಷಕರಿಂದಲೇ ಆರಂಭವಾಗುತ್ತದೆ. ಸಣ್ಣಂದಿನಲ್ಲಿ ಊಟ ಮಾಡಿಸಲು ಮೊಬೈಲ್ ತೋರಿಸುವ ನಾವು ಮಕ್ಕಳಿಗೆ ಮೊಬೈಲ್ ಗೀಳು ಹತ್ತಿಸುತ್ತೇವೆ. ಮೊಬೈಲ್, ಆನ್ಲೈನ್ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಆಪ್ತ ಸಲಹೆಗಳನ್ನು ನೀಡಲು ಪ್ರತಿ ಶಾಲೆಯಲ್ಲಿ ಕೌನ್ಸಿಲಿಂಗ್ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.
ಇನ್ನೋರ್ವ ತಜ್ಞರಾದ ಡಾ.ಅರವಿಂದ್ ಅವರು ಮಾತನಾಡಿ, ಮೊಬೈಲ್ ಚಟದಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕೊರತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಅಸಹನೆ, ಆಸಕ್ತಿ ಕೊರತೆ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಆರಂಭದಲ್ಲಿಯೇ ಪೋಷಕರು ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ನಿಯಂತ್ರಿಸಬಹುದಾಗಿದೆ. ಸಣ್ಣಂದಿನಲ್ಲಿ ಮಕ್ಕಳು ಅನಗತ್ಯ ವಸ್ತುಗಳಿಗೆ ಹಠ ಮಾಡಿದರೆ ಅದನ್ನು ನಿರ್ಲಕ್ಷಿಸಿದರೆ ಮಗುವಿನ ಸ್ವಭಾವದಲ್ಲಿಯೂ ಬದಲಾವಣೆ ಕಾಣಬಹುದು. ರಂಪಾಅಟ ಮಾಡಿದಾಗ ಬಯಸಿದ್ದು, ಸಿಗುತ್ತದೆ ಎಂದಾದರೆ ಮಕ್ಕಳು ಅದೇ ಪರಿಪಾಟ ಮುಂದುವರೆಸುತ್ತಾರೆ. ಮನೆಯಲ್ಲಿ ಮಕ್ಕಳಿಗೆ ಮೊಬೈಲ್ ನೋಡಲು ಸಮಯ ನಿಗದಿಪಡಿಸುವುದು, ಮೊಬೈಲ್ಗೆ ಪಾಸ್ವರ್ಡ್ ಹಾಕುವುದು ಸೇರಿದಂತೆ ಪೋಷಕರ ಮೇಲ್ನೋಟದಲ್ಲಿ ಮಾತ್ರ ಮೊಬೈಲ್ ಬಳಸಲು ಮಕ್ಕಳಿಗೆ ಅವಕಾಶ ನೀಡಬೇಕು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಉಪ ಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಡಿಸಿಪಿಐ ಸುಮಂಗಲಾ ಮತ್ತಿತರರು ಉಪಸ್ಥಿತರಿದ್ದರು.