ಶಿವಮೊಗ್ಗ, ಫೆಬ್ರವರಿ 20 : ಪ್ರೇರಣಾ ಎಜುಕೇಶನಲ್ ಮತ್ತು ಸೋಶಿಯಲ್ ಟ್ರಸ್ಟ್, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಫೆಬ್ರವರಿ 27ರಂದು ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಶಿವಮೊಗ್ಗದ ತಮ್ಮ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಬೃಹತ್ ಶಿಬಿರದಲ್ಲಿ ಹೃದಯ ವಿಭಾಗ, ಜನರಲ್ ಮೆಡಿಸಿನ್, ಶ್ವಾಸಕೋಶ ವಿಭಾಗ, ಕೀಲು-ಮೂಳೆ ಮತ್ತು ಕೀಲು ಮರುಜೋಡಣಾ ವಿಭಾಗ ಹಾಗೂ ಸ್ತ್ರೀರೋಗ ವಿಭಾಗಗಳ ತಜ್ಞ ವೈದ್ಯರುಗಳು ಆಗಮಿಸಿ, ಆರೋಗ್ಯ ತಪಾಸಣೆ ನಡೆಸುವರು. ಈ ಅವಧಿಯಲ್ಲಿ ಬಿ.ಪಿ., ಇ.ಸಿ.ಜಿ.ಎಕೋ., ಜಿ.ಆರ್.ಬಿ.ಎಸ್.(ಸಕ್ಕರೆ ಪ್ರಮಾಣ ಪರೀಕ್ಷೆ ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸಲಾಗುವುದಲ್ಲದೇ ತಜ್ಞವೈದ್ಯರ ಸಲಹೆಯಂತೆ ಉಚಿತವಾಗಿ ಸಾಮಾನ್ಯ ಔಷಧವನ್ನು ವಿತರಿಸಲಾಗುವುದು ಎಂದ ಅವರು ಈ ಕಾರ್ಯಕ್ರಮದ ಯಶಸ್ವಿಗಾಗಿ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯಡಿ ಬಿ.ಪಿ.ಎಲ್. ಕುಟುಂಬಕ್ಕೆ 5.00ಲಕ್ಷ ಹಾಗೂ ಬಿ.ಪಿ.ಎಲ್. ಕುಟುಂಬಕ್ಕೆ 5.00ಲಕ್ಷಗಳ ಆರ್ಥಿಕ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ 15.00ಲಕ್ಷ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸಂಯುಕ್ತವಾಗಿ ರೂಪಿಸಿ ಅನುಷ್ಠಾನಗೊಳಿಸಿರುವ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಕಾರ್ಡ್ ಪಡೆದ ಫಲಾನುಭವಿಗಳ ಪಟ್ಟಿಯಲ್ಲಿ 13ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯು, ಪ್ರೇರಣಾ ಟ್ರಸ್ಟ್ ಸ್ಥಳೀಯ ಸಂಘ-ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ 2019ರ ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಿದ್ದ ವಿಶೇಷ ಆಂದೋಲನದ ನಂತರ ಆರೋಗ್ಯ ಕಾರ್ಡ್ ಪಡೆದ ಫಲಾನುಭವಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದರಿಂದಾಗಿ 08ನೇ ಸ್ಥಾನ ಪಡೆಯುವಂತಾಯಿತು. ಅಲ್ಲದೇ ಸದರಿ ಮಾಹೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮೊದಲನೇ ಸ್ಥಾನದಲ್ಲಿ ಗುರುತಿಸಿಕೊಳ್ಳುವಂತಾಯಿತು ಎಂದವರು ನುಡಿದರು.
ಸಭೆಯಲ್ಲಿ ಎನ್.ಜೆ.ರಾಜಶೇಖರ್, ಎಸ್. ದತ್ತಾತ್ರಿ, ಜ್ಯೋತಿಪ್ರಕಾಶ್, ಜ್ಞಾನೇಶ್ವರ್, ಮಹಾಪೌರರಾದ ಶ್ರೀಮತಿ ಸುವರ್ಣ ಶಂಕರ್, ಯಡಿಯೂರಪ್ಪ ಅಭಿಮಾನಿ ಬಳಗದ ಸಂಚಾಲಕ ಬಳ್ಳೆಕೆರೆ ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.