ಮೈದಾನ ಪ್ರದೇಶದಲ್ಲಿ, ಮೇ – ಜೂನ್ ನಲ್ಲಿ ಮತ್ತು ಅಧಿಕ ಮಳೆ ಬೀಳುವ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲಿ ಸಸಿಗಳನ್ನು ನಾಟಿ ಮಾಡುವುದು ಸೂಕ್ತ. ಪ್ರತಿ ಮರಕ್ಕೆ 15 ರಿಂದ 20 ಕೆ.ಜಿ ಕೊಟ್ಟಿಗೆ ಗೊಬ್ಬರವನ್ನು ಟ್ರೈಕೋಡರ್ಮಾ ಮತ್ತು ಸುಡೊಮೊನಾಸ್ ಜೈವಿಕ ಸೂಕ್ಷ್ಮಾಣುಗಳೊಂದಿಗೆ ಮಿಶ್ರಣಮಾಡಿ ಭೂಮಿಗೆ ಸೇರಿಸಬೇಕು. ಒಂದು ತಿಂಗಳ ನಂತರ ಫಲ ಬಿಡುವ ಪ್ರತಿ ಮರಕ್ಕೆ (ವರ್ಷಕ್ಕೆ) 100 ಗ್ರಾಂ ಸಾರಜನಕ, 40 ಗ್ರಾಂ ರಂಜಕ, 140 ಗ್ರಾಂ ಪೊಟ್ಯಾಷ್ ರಾಸಾಯನಿಕ ಗೊಬ್ಬರವನ್ನು ಕೊಡಬೇಕಾಗುತ್ತದೆ. ಗೊಬ್ಬರದ 1/3 ಭಾಗವನ್ನು ಮೇ-ಜೂನ್ ತಿಂಗಳಿನಲ್ಲಿಯೂ, 2/3 ಭಾಗವನ್ನು ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ಕೊಡಬೇಕು.
ಹಸಿರೆಲೆ ಗೊಬ್ಬರಕ್ಕೆಂದು ಯೋಗ್ಯವಾದ ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಉದ್ದು, ಸೆಣಬು, ಅವರೆ, ಡಯಾಂಚ್, ಸಸ್ಬೆನಿಯಾ ಬೆಳೆಗಳನ್ನು 7 ರಿಂದ 8 ವಾರಗಳ ಕಾಲ ಚೆನ್ನಾಗಿ ಬೆಳೆದ ಸಸಿಗಳನ್ನು ಕಾಯಿ ಕಚ್ಚುವ ಮೊದಲು ಭೂಮಿಗೆ ಉಳುಮೆ ಮಾಡುವುದರ ಮೂಲಕ ಸೇರಿಸಬೇಕು. ಮುಂಗಾರಿನ ಮೊದಲು ಬಸಿಗಾಲುವೆಗಳಲ್ಲಿ ಬಿದ್ದಿರುವ ಮಣ್ಣನ್ನು ಸ್ವಚ್ಛಗೊಳಿಸುವುದರಿಂದ ಮಳೆಗಾಲದಲ್ಲಿ ಸರಾಗವಾಗಿ ಹೆಚ್ಚಿನ ಮಳೆ ನೀರು ಹರಿದು ಹೋಗಲು ಅನುಕೂಲವಾಗುವುದಲ್ಲದೇ, ತಂತು ಬೇರುಗಳ ಉಸಿರಾಡುವಿಕೆಗೆ ಅನುಕೂಲವಾಗುತ್ತದೆ. ಅಡಿಕೆ ತೋಟದಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು (ಗರಿ ಮತ್ತು ಹಾಳೆ) ಚಿಕ್ಕ ಗಾತ್ರದಲ್ಲಿ ಕತ್ತರಿಸಿ ಮರಗಳ ಸುತ್ತ ಹೊದಿಕೆ ಮಾಡುವುದರಿಂದ ಕಳೆ ನಿಯಂತ್ರಣ, ತೇವಾಂಶ ಹಿಡಿದಿಟ್ಟುಕೊಳ್ಳುವಿಕೆ ಹಾಗೂ ಹೆಚ್ಚಿನ ನೀರು ಬಸಿದು ಹೋಗುವುದಕ್ಕೆ ಸಹಕಾರಿಯಾಗುತ್ತದೆ.
ಎಳೆಯ ಅಡಿಕೆ ತೋಟದಲ್ಲಿ ಬಾಳೆ, ಶುಂಠಿ, ಮೆಣಸಿನಕಾಯಿ, ಅರಿಷಿಣ ಮತ್ತು ಸುವರ್ಣಗಡ್ಡೆಗಳನ್ನು ಬೆಳೆಯಬಹುದು. ನಂತರದ ವರ್ಷಗಳಲ್ಲಿ ಕರಿಮೆಣಸು, ಕೋಕೋ, ಬಾಳೆ ಮತ್ತು ವಿಳ್ಯೆದೆಲೆ ಬೆಳೆಗಳು ಲಾಭದಾಯಕವಾಗಿ ಎಲ್ಲಾ ಪ್ರದೇಶಗಳಲ್ಲಿ ಅಂತರ/ ಮಿಶ್ರಬೆಳೆಗಳನ್ನು ಬೆಳೆಯಬಹುದು.
ಪೆಂಟಟೋಮಿಡ್ ತಿಗಣೆ (ಹೋಲಿಯೋಮಾರ್ಪ ಮಾರ್‍ಮಾರಿಯೆಲ್) ಈ ಕೀಟದ ಹಾವಳಿಯು ಏಪ್ರಿಲ್ ಯಿಂದ ಜೂನ್ ತಿಂಗಳಿನಲ್ಲಿ ಎಳೆಯ ಕಾಯಿ ಕಟ್ಟುವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ತೊಟ್ಟಿನ ಭಾಗದಲ್ಲಿ ರಸ ಹೀರುವುದರಿಂದ ಅಂತಹ ಅಡಿಕೆ ಕಾಯಿಗಳು ಬಲಿಯುವುದಕ್ಕಿಂತ ಮೊದಲೇ ಉದುರಿ ಕೆಳಗೆ ಬೀಳುತ್ತವೆÉ. ಅಂತಹ ಕಾಯಿಗಳ ತೊಟ್ಟಿನ ಭಾಗವನ್ನು ಪರೀಕ್ಷಿಸಿದಾಗ ಸೂಜಿಯಿಂದ ಚುಚ್ಚಿದಂತಹ ಕಪ್ಪು ಬಣ್ಣದ ಗುರುತು ಕಾಣಿಸುತ್ತದೆ. 1.7 ಮಿ.ಲೀ ಡೈಮಿಥೋಯೆಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಕೀಟ ಬಾಧಿಸಿದ ಮರ ಮತ್ತು ಸುತ್ತಲಿನ ಮರಗಳಿಗೆ ಏಪ್ರಿಲ್ ಯಿಂದ ಮೇ ತಿಂಗಳಲ್ಲಿ ಸಿಂಪಡಿಸಬೇಕು
ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ತೋಟದಲ್ಲಿ ಹೆಚ್ಚು ಮಳೆಯಾಗುವುದರಿಂದ ಕೊಳೆ ರೋಗದ ಹಾನಿಯಿಂದ ರೈತರಿಗೆ ಅಡಿಕೆ ಇಳುವರಿಯಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಈ ರೋಗವನ್ನು ಶೇಕಡಾ 1ರ ಬೋರ್ಡೋ ದ್ರಾವಣ ಸಿಂಪಡಿಸುವ ಮೂಲಕ ನಿಯಂತ್ರಿಸಬಹುದಾಗಿದೆ. ಮೊದಲನೆ ಸಿಂಪರಣೆಯನ್ನು ಮುಂಜಾಗರೂಕತಾ ಕ್ರಮವಾಗಿ ಮುಂಗಾರು ಪ್ರಾರಂಭವಾಗುವ ಸೂಚನೆಗಳು ಕಂಡುಬಂದ ಕೂಡಲೇ ಮಾಡುವುದು ಬಹಳ ಉತ್ತಮ.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: . ನಾಗರಾಜಪ್ಪ ಅಡಿವಪ್ಪರ್
ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ. ಮೊಬೈಲ್‌ ಸಂಖ್ಯೆ: 95352 50742

error: Content is protected !!