News Next

ಶಿವಮೊಗ್ಗ, ಮಾರ್ಚ್ 17 : ವಿಶ್ವದಾದ್ಯಂತ ಕೋವಿಡ್-19 (ಕರೋನಾ) ಸೋಂಕು ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ಪಿಡುಗು ಎಂಬುದಾಗಿ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕರೋನ ಹರಡುವಿಕೆಯನ್ನು ತಡೆಗಟ್ಟಲು ಬಳಸುವ ವೈಯಕ್ತಿಕ ಸುರಕ್ಷತಾ ಸಾಧನಗಳಾದ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಜೂನ್ 2020ರ ವರೆಗೂ ಅಗತ್ಯ ವಸ್ತುಗಳೆಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ಇವುಗಳ ಕೃತಕ ಅಭಾವ ಸೃಷ್ಠಿಸಿ ಎಂ.ಆರ್.ಪಿ ಗಿಂತ ಅಧಿಕ ಬೆಲೆಗೆ ಮಾರಾಟ ಮಾಡುವುದನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿರುತ್ತಾರೆ. ಜಿಲ್ಲೆಯ ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳ ಕೃತಕ ಅಭಾವವನ್ನು ಸೃಷ್ಟಿಸಿ ದಾಸ್ತಾನು ಖಾಲಿಯಾಗಿರುವುದಾಗಿ ಹೇಳುವುದರ ಮೂಲಕ ಎಂ.ಆರ್.ಪಿ.ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕಂದಾಯ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಾಶಾಸ್ತ್ರ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳನ್ನೊಳಗೊಂಡ ತಂಡವು ತನಿಖೆ/ತಪಾಸಣೆ ಕೈಗೊಂಡು ಕೋವಿಡ್-19ರ ಸೋಂಕು ತಡೆಗಟ್ಟಲು ಬಳಸುವ ವೈಯಕ್ತಿಕ ಸುರಕ್ಷತಾ ಸಾಧನಗಳ ಕೃತಕ ಅಭಾವ ಉಂಟಾಗದಂತೆ ಹಾಗೂ ಸಾರ್ವಜನಿಕರಿಗೆ ಎಂ.ಆರ್.ಪಿ.ದರದಲ್ಲಿ ಲಭ್ಯವಾಗುವಂತೆ ಕ್ರಮವಹಿಸುವುದು. ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ಮತ್ತು ಪೊಟ್ಟಣ ಸಾಧನಗಳ ಕಾಯ್ದೆ-2009ರಡಿ ಕ್ರಮ ಜರುಗಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರು- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಉಪವಿಭಾಗಾಧಿಕಾರಿಗಳು-ಶಿವಮೊಗ್ಗ/ಸಾಗರ ಉಪವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಸಹಾಯಕ ನಿಯಂತ್ರಕರು- ಔಷಧ ನಿಯಂತ್ರಣಾ ಇಲಾಖೆ, ಅಂಕಿತ ಅಧಿಕಾರಿಗಳು- ಆಹಾರ ಸುರಕ್ಷಿತ ಹಾಗು ಗುಣಮಟ್ಟ ಪ್ರಾಧಿಕಾರ, ಸಹಾಯಕ ನಿಯಂತ್ರಕರು-ಕಾನೂನು ಮಾಪನಾ ಶಾಸ್ತ್ರ ಇಲಾಖೆ, ಜಿಲ್ಲೆಯ ಎಲ್ಲಾ ತಹಶೀಲ್ದಾರರುಗಳು ಹಾಗೂ ತಾಲೂಕು ಮಟ್ಟದಲ್ಲಿ ಆಯಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಮುಂಜಾಗ್ರತೆಯಾಗಿ ಜೂನ್-2020ರವರೆಗೆ ಅಗತ್ಯ ತಪಾಸಣೆ ಕೈಗೊಳ್ಳಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿರುತ್ತಾರೆ.

error: Content is protected !!