ಭದ್ರಾವತಿ : ಬದುಕನ್ನು ಸರಿಯಾಗಿ ನಡೆಸಲು ಮಕ್ಕಳಲ್ಲಿ ಮಾನವೀಯತೆಯ ಅನೇಕ ಸ್ಪರ್ಶಗಳನ್ನು ಹೇಳಿಕೊಡಬೇಕಾದ ಅಗತ್ಯವಿದೆ. ಅದಕ್ಕೆ ಕನ್ನಡ ಪಠ್ಯ, ಅದರಲ್ಲಿರುವ ಸಾಹಿತ್ಯ ಜೊತೆಗೆ ಪೂರಕ ಸಾಹಿತ್ಯದ ಅನುಭವ ದಾರೆ ಎರೆಯಿರಿ ಎಂದು ಚಿಂತಕರಾದ ಪ್ರೊ. ಚಂದ್ರಶೇಖರಯ್ಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಸಮಿತಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಈಚೆಗೆ ಭದ್ರಾವತಿ ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಎರಡು ದಿನಗಳ ಕನ್ನಡ ಸಾಹಿತ್ಯ ರಸಗ್ರಹಣ ಶಿಬಿರದ ಎರಡನೇ ದಿನದಲ್ಲಿ ಕಥೆ ಪ್ರಬಂಧ ಓದು, ವಿಶ್ಲೇಷಣೆ ಕುರಿತು ಮಾಹಿತಿ ನೀಡಿದರು.
ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಚಂಚಲತೆ ಇರುತ್ತದೆ. ಮಗುವಿಗೆ ಜ್ವರ ಬಂದಾಗ ಅಮ್ಮ ತಾಯತ ಕಟ್ಟುತ್ತಾರೆ. ವೈದ್ಯರು ಮಾತ್ರೆ ಕೊಡುತ್ತಾರೆ. ಕಾಯಿಲೆ ಯಾವುದರಿಂದ ಹೋಯಿತು ತಿಳಿಯದ ಮಗು ಮೌಢ್ಯದ ಪ್ರಭಾವಕ್ಕೆ ಒಳಗಾಗದಂತೆ ನೈತಿಕ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಕಲಿಸಲು ಶಿಕ್ಷಕರ ಪಾತ್ರ ಮಹತ್ವದ್ದು ಎಂದು ವಿವರಿಸಿದರು.
ಉಪನ್ಯಾಸಕರಾದ ಡಾ. ತಂಬೂಳಿ ಬಿ.ಎಸ್. ಮಾತನಾಡಿ, ವಚನಕಾರರು ನುಡಿದಂತೆ ನಡೆದ ಆದರ್ಶ ಬದುಕನ್ನು ಮಕ್ಕಳಿಗೆ ತಿಳಿಸುವ ಬಗೆಯನ್ನು ಚರ್ಚೆ ಮಾಡಿದರು. ಡಾ. ಎಸ್. ಎಂ. ಮುತ್ತಯ್ಯ ಅವರು ಪಠ್ಯದಲ್ಲಿ ಜನಪದ ಸಾಹಿತ್ಯ ಶೇ.5 ಇಲ್ಲವಾಗಿದೆ. ಜನಪದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜನಪದ ಎಂದರೆ ಬರೀ ಹಾಡಲ್ಲ. ಆದರೆ ಜನಪದದ ಆಸಕ್ತಿ ಮೂಡಿಸಲು ಹೇಗೆ ಪ್ರಯತ್ನ ಮಾಡಬೇಕು ಎಂದು ವಿವರಿಸಿದರು.
ಉಪನ್ಯಾಸಕರಾದ ಜಿ.ಆರ್. ಲವ ಮಾತನಾಡಿ, ಪಠ್ಯದಲ್ಲಿರುವ ನಾಟಕವನ್ನು ಓದುವ, ಅಭಿನಯಿಸುವ, ಪರಿಣಾಮಕಾರಿ ವಿಚಾರ ಮಾಡಲು ತರಗತಿ, ಒಳಗೆ ಹೊರಗೆ ಹೇಗೆ ಶಿಕ್ಷಕರು ಶ್ರಮಿಸಬೇಕು ಎಂಬುದನ್ನು ವಿವರಿಸಿದರು.
ಬಿ.ಇ.ಓ. ನಾಗೇಂದ್ರಪ್ಪ ಅವರು ಕನ್ನಡ ಭಾಷಾ ಕೌಶಲ್ಯ ಕುರಿತು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ, ತಾಲ್ಲೂಕು ಅಧ್ಯಕ್ಷರಾದ ಸುಧಾಮಣಿ ಉಪಸ್ಥಿತರಿದ್ದರು.