ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಹೊಂದಿದ್ದು, ಅವುಗಳ ರಕ್ಷಣೆ ಮಾಡುವುದು, ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಇಂದು ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪದವಿಪೂರ್ವ ಶಿಕ್ಷಣ ಇಲಾಖೆ ಇವರುಗಳ ಸಹಯೋಗದೊಂದಿಗೆ ನಗರದ ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಸಮಾಜದಲ್ಲಿನ ಪ್ರತಿಯೊಬ್ಬರೂ ಬೆಂಬಲಿಸುವಂತೆ ಹಾಗೆಯೇ ಅನುಸರಿಸುವಂತೆ ಸೂಚಿಸಿದರು.
ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ವಸತಿ ಮತ್ತು ಬಟ್ಟೆ. ಇವುಗಳಿಲ್ಲದೆ ಮನುಷ್ಯನ ಜೀವನವನ್ನು ಊಹಿಸಲಾಗದು. ಈ ಮೂಲ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಮನುಷ್ಯನ ಈ ಮೂಲಭೂತ ಹಕ್ಕುಗಳನ್ನು ದಮನಿಸುವ ಪ್ರಯತ್ನಗಳು ನಡೆಯುತ್ತವೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಇತರರ ಬದುಕಿನ ಹಕ್ಕನ್ನು ಕಸಿಯುವುದು, ಹಿಂಸೆ ನೀಡುವುದು ಇದರ ವ್ಯಾಪ್ತಿಯೊಳಗೆ ಬರುತ್ತವೆ. ನಾವು ಪರರ ನೆಮ್ಮದಿಯ ಬದುಕಿಗೆ ಭಂಗ ಉಂಟಾಗದಂತೆ ಅವರ ವ್ಯಕ್ತಿ ಸ್ವಾತಂತ್ರ್ಯವನ್ನು ಕೂಡ ಗೌರವಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಅವರು ಮಾತನಾಡಿ,
ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗೆಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜೀವಿಸುವುದು, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜತೆಗೆ ದೌರ್ಜನ್ಯದ ವಿರುದ್ಧ ದನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದರು.
ಪ್ರತಿಯೊಬ್ಬರಿಗೂ ಸಂವಿಧಾನದತ್ತವಾಗಿ ಹಕ್ಕುಗಳಿದ್ದು, ಅವುಗಳನ್ನು ಅನುಭವಿಸುತ್ತಿರುವಂತೆಯೆ, ಕರ್ತವ್ಯ ಗಳನ್ನು ಅರಿತು ಪಾಲಿಸುವಂತೆ ಹಾಗೂ ಸಂವಿಧಾನದ ಆಶಯಕ್ಕೆ ಪೂರಕವಾಗಿ ಜೀವನ ನಿರ್ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದೆ ಮಾತ್ತವಲ್ಲ ನಾಗರೀಕ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮನೋನಿಗ್ರಹದಿಂದ ಯುವಕರ ಭವಿಷ್ಯ ಉಜ್ವಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ರಾಜಕುಮಾರ್ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಕಾಲೇಜಿನ ಪ್ರಾಚಾರ್ಯ ಚನ್ನಪ್ಪ, ಚಂದ್ರಪ್ಪಗುಂಡಪಲ್ಲಿ ಮತ್ತಿತರರು ಉಪಸ್ಥಿತರಿದ್ದರು.