ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ದಿನಾಂಕ 11-08-2021 ರಿಂದ 16-08-2021ರವರೆಗೆ ಪರಿಶಿಷ್ಠ ಜಾತಿ ಸಮೂಹಗಳಿಗೆ ಜೀವನೋಪಾಯದ ಉನ್ನತೀಕರಣ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಕುರಿತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 11-08-2021ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಂ. ಕೆ. ನಾಯಕ್, ಗೌರವಾನ್ವಿತ ಕುಲಪತಿಗಳು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ನೆರವೇರಿಸಿ ಮಾತನಾಡುತ್ತಾ, ಈ ಆರು ದಿನಗಳ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ವಿವಿಧ ಇಲಾಖೆಗಳಿಂದ ಪರಿಶಿಷ್ಠ ಜಾತಿ ಸಮೂಹದವರಿಗೆ ದೊರೆಯುವ ಸೌಲಭ್ಯಗಳ ಕುರಿತು ಮತ್ತು ತಮ್ಮ ಸಾಮಥ್ರ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳುವಂತೆ ಮಾಹಿತಿ ನೀಡಲಾಗುವುದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಸಾಮಥ್ರ್ಯ ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕೆ ಉದಾಹರಣೆಯಾಗಿ ವಿವರಿಸುತ್ತಾ, ಗೋಡಂಬಿಯನ್ನು ರೈತರು ತಾವುಗಳು 3-4 ವರ್ಷ ಕಷ್ಟಪಟ್ಟು ನೀರುಣಿಸಿ, ಗೊಬ್ಬರ ಹಾಕಿ, ಪಾಲನೆ ಪೋಷಣೆ ಮಾಡಿ ಗೋಡಂಬಿ ಬೀಜವನ್ನು ಅತ್ಯಲ್ಪ ಬೆಲೆಗೆ ಮಾರಾಟ ಮಾಡುತ್ತಾರೆ. ಇದರ ಬದಲಿಗೆ ಬೀಜವನ್ನು ತೆಗೆದು, ಅದನ್ನು ಸಂಸ್ಕರಿಸಿ, ಅದರಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡಿದ್ದೇ ಆದಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ಕಿವಿಮಾತು ಹೇಳಿದರು. ಅದರಂತೆಯೇ ಟೊಮ್ಯಾಟೋ ಹಣ್ಣು, ಅನಾನಸ್ ಹಣ್ಣು ಹಾಗೂ ಇತರೆ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದ್ದಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಎಸ್. ಯು. ಪಾಟೀಲ್, ಸಹ ವಿಸ್ತರಣಾ ನಿರ್ದೇಶಕರು, ವಿಸ್ತರಣಾ ನಿರ್ದೇಶನಾಲಯ, ಕೆ.ಶಿ.ಕೃ.ತೋ.ವಿ.ವಿ., ಶಿವಮೊಗ್ಗ ಇವರು ಮಾತನಾಡುತ್ತಾ, ನಮ್ಮ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಠ ಜಾತಿ ಸಮೂಹಗಳಿಗೆ ಸಾಮಥ್ರ್ಯಾಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿವಿಧ ಇಲಾಖೆಗಳಿಂದ ಪರಿಶಿಷ್ಠ ಜಾತಿ ಸಮೂಹಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು. ಆದ್ದರಿಂದ ಭಾಗವಹಿಸಿದ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕೆ. ಸಿ. ಶಶಿಧರ, ವಿಸ್ತರಣಾ ನಿರ್ದೇಶಕರು, ಕೆ.ಶಿ.ಕೃ.ತೋ.ವಿ.ವಿ., ಶಿವಮೊಗ್ಗ ಇವರು ಮಾತನಾಡುತ್ತಾ, ಈಗಾಗಲೇ ತಿಳಿಸಿದಂತೆ ಬೆಳೆಗಳನ್ನು ಇರುವ ಸ್ಥಿತಿಯಲ್ಲಿ ನೇರವಾಗಿ ಅಥವಾ ಮಧ್ಯವರ್ತಿಗಳಿಗೆ ಮಾರಾಟ ಮಾಡದೆ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಅದರಿಂದ ಹೆಚ್ಚಿನ ಲಾಭ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ಈ ಆರು ದಿನಗಳ ತರಬೇತಿ ಉಪಯುಕ್ತವಾಗಿದೆ. ಆದ್ದರಿಂದ ಭಾಗವಹಿಸಿದ ತಾವು ಯಾವ ಬೆಳೆಯಲ್ಲಿ ಮೌಲ್ಯವರ್ಧಿತ ತಯಾರಿಸಬಹುದೆಂದು ಈ ತರಬೇತಿಯಲ್ಲಿ ಕೂಲಂಕುಷವಾಗಿ ಚರ್ಚಿಸುವಂತೆ ಸಲಹೆ ನೀಡಿದರು.
ಡಾ.ಬಿ.ಸಿ.ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆ.ವಿ.ಕೆ., ಶಿವಮೊಗ್ಗ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಅರುಣ್ಕುಮಾರ್, ಪಿ., ವಿಜ್ಞಾನಿ (ಕೃಷಿ ವಿಸ್ತರಣೆ) ಇವರು ನಡೆಸಿಕೊಟ್ಟರು. ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ) ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ವಿ.ಕೆ. ಸಿಬ್ಬಂದಿಗಳು ಸಹ ಉಪಸ್ತಿತರಿದ್ದರು. ಪರಿಶಿಷ್ಠ ಜಾತಿ ಸಮೂಹಗಳಿಗೆ ಸೇರಿದ ಒಟ್ಟು 30 ಜನರು ಭಾಗವಹಿಸಿರುತ್ತಾರೆ.
ಈ ಆರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳು, ಯೋಜನೆಗಳು, ಹೆಚ್ಚುವರಿ ಆದಾಯಕ್ಕೆ ಸಮಗ್ರ ಕೃಷಿ ಪದ್ಧತಿ, ಕೃಷಿಯೊಂದಿಗೆ ಕೈಗೊಳ್ಳಬಹುದಾದ ಇತರೆ ಸಹ ಉದ್ಯಮಗಳಾದ ಜೇನುಸಾಕಾಣಿಕೆ, ಅಣಬೆ ಕೃಷಿ, ಕುರಿ,ಮೇಕೆ, ಕೋಳಿ ಸಾಕಾಣಿಕೆ ಕುರಿತ ಮಾಹಿತಿಯನ್ನು ನೀಡಲಾಗುವುದು ಅಲ್ಲದೆ, ಒಂದು ದಿನ ಸಾಗರ ತಾಲ್ಲೂಕಿನ ಚಿಪ್ಲಿ ಗ್ರಾಮದ ಜೇನುಸಾಕಾಣಿಕೆ ಘಟಕಕ್ಕೆ ಅಧ್ಯಯನ ಪ್ರವಾಸವನ್ನು ಸಹ ಆಯೋಜಿಸಲಾಗಿದೆ.