ಶಿವಮೊಗ್ಗ, ಅಕ್ಟೋಬರ್-26 : ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿ ಯುವಜನತೆ ತಮ್ಮ ಭವಿಷ್ಯವನ್ನು ನಾಶ ಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.
ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಎಂ.ಪಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರುದ್ಧ ಯುವಜನತೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ಕೇವಲ ಮೋಜಿಗಾಗಿ ಅಥವ ಜೀವನದ ಸಮಸ್ಯೆಗಳನ್ನು ಮರೆಯಲು ವ್ಯಸನದಲ್ಲಿ ಬೀಳುವ ಯುವ ಜನರಿಗೆ ಮಾದಕ ವ್ಯಸನವೆ ದೊಡ್ಡ ಸಮಸ್ಯೆ ಎಂದು ಅರಿವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮಾದಕ ವ್ಯಸನದಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಅವರು ಹೇಳಿದರು.
ಮಾದಕ ವಸ್ತುಗಳ ವ್ಯಸನದ ಕೂಪಕ್ಕೆ ವ್ಯಕ್ತಿ ಯಾವುದೋ ಸಮಯದಲ್ಲಿ ಬಿದ್ದಿರಬಹುದು, ಆದರೆ ವಿವೇಚನೆಯಿಂದ ಯೋಚಿಸಿ ಅದರಿಂದ ಹೊರಬರುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕುಟುಂಬ ಹಾಗೂ ಸಮಾಜ ಸಹಕರಿಸಬೇಕು ಎಂದು ಅವರು ಸಲಹೆ ನೀಡಿದರು.
ಮಾದಕ ವ್ಯಸನಗಳನ್ನು ತ್ಯಜಿಸಲು ಚಿಕಿತ್ಸೆಗಳು ಸಹ ಲಭ್ಯವಿದ್ದು ಸೂಕ್ತ ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಂಡಲ್ಲಿ ವ್ಯಸನ ಮುಕ್ತ ಜೀವನ ನಡೆಸಲು ಸಾಧ್ಯವಿದೆ ಎಂದು ಅವರು ಹೇಳಿದರು.
ಮನೋರೋಗ ತಜ್ಞ ಡಾ. ಎಸ್. ಟಿ ಅರವಿಂದ ಮಾತನಾಡಿ ಮಾದಕ ವಸ್ತುಗಳ ವ್ಯಸನದಿಂದ ವ್ಯಕ್ತಿ ದೈಹಿಕ, ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ಈ ಕಾರಣದಿಂದ ಮಾದಕ ವಸ್ತುಗಳ ಸಹವಾಸದಿಂದ ಜನರು ದೂರ ಉಳಿಯ ಬೇಕು, ಈ ಸಲುವಾಗಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮಾದಕ ವಸ್ತುಗಳಲ್ಲಿನ ರಾಸಾಯನಿಕಗಳು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ಖಿನ್ನತೆ, ಸ್ಕಿಜೋಪೋಮಿಯಾ ಹಾಗೂ ಕ್ಯಾನ್ಸರ್‍ನಂತಹ ಕಾಯಿಲೆಗಳಿಗೆ ಕಾರಣವಾಗುತ್ತಿದ್ದು ಯುವ ಜನತೆ ಇವುಗಳಿಂದ ದೂರ ಸರಿದಲ್ಲಿ ಸದೃಡ ದೇಶವನ್ನು ಕಟ್ಟಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿ.ವಿ ಕುಲಪತಿ ಎಂ.ಕೆ ನಾಯಕ್ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಪಾಲಿಕೆ ಕಾರ್ಪೋರೇಟರ್ ವಿಶ್ವಾಸ್, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ ಕಾಂತೇಶ್, ವಾರ್ತಾ ಇಲಾಖೆ ನಿರ್ದೇಶಕ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು. ಶಾಂತಿ ಸಾಗರ ಕಲಾ ತಂಡದಿಂದ ಜಾಗೃತಿ ಗೀತೆಗಳ ಗಾಯನ ನಡೆಯಿತು.

error: Content is protected !!