ಶಿವಮೊಗ್ಗ ಫೆಬ್ರವರಿ-01 : ಜಾತಿಯ ಎಲ್ಲೇ ಮೀರಿ ಸಮಾಜದಲ್ಲಿ ಜಾತ್ಯತೀತ ಸಂದೇಶ ಸಾರಿದ ಶರಣರ ಚಿಂತನೆಗಳು ವಿಶ್ವ ಸಾಹಿತ್ಯಕ್ಕೆ ವಿಶೇಷ ಕೊಡುಗೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜು ಉಪನ್ಯಾಸಕ ಶಿವಣ್ಣ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಮಡಿವಾಳ ಸಮಾಜ ಸಂಘ ಇವರುಗಳ ಸಹಯೋಗದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮಡಿವಾಳ ಮಾಚಿದೇವರು ಶರಣರಲ್ಲಿ ಅಗ್ರಗಣ್ಯರಾಗಿದ್ದು, ಅವರೊಬ್ಬ ಮಹಾನ್ ಪುರುಷ. 12ನೇ ಶತಮಾನದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹಿಂದುಳಿದ ಹಾಗೂ ಶ್ರಮಜೀವಿ ವರ್ಗದ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಪ್ರಮುಖರು. ಮೇಲು ಕೀಳು, ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೆ ಒಳಗಾದವರ ಬಗ್ಗೆ ಚಿಂತಿಸಿ ವ್ಯಕ್ತಿ ವ್ಯಕ್ತಿಗಳ ಬಗ್ಗೆ ಇರುವ ಅಂತರವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ ಜನರಲ್ಲಿ ಭಕ್ತಿ ಪ್ರಧಾನ ಚಿಂತನೆಗಳನ್ನು ತುಂಬಿಸಿದ ಅವರು 3 ಲಕ್ಷಕ್ಕೂ ಹೆಚ್ಚು ವಚನಗಳನ್ನು ಬರೆದು, ಶರಣರ ಸಂಸ್ಕøತಿಯನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದ ತಳಮಟ್ಟದ ಜನರನ್ನು ಮೇಲೆತ್ತುವ ಕಾಯಕಕ್ಕಾಗಿ ಅಹಿಂಸೆ ತತ್ವವನ್ನು ಅಳವಡಿಸಿಕೊಂಡ ಅವರ ವಿಶಾಲತೆ ಸರ್ವರಿಗೂ ಮಾದರಿ ಎಂದರು.
ಶಾಸಕ ಎಸ್. ರುದ್ರೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಸಮಾಜ ಸುಧಾರಣೆ ತಂದು ಬದಲಾವಣೆ ಮಾಡಿದವರು ಮಡಿವಾಳ ಮಾಚಿದೇವರು. ಜಾತಿ ಪದ್ಧತಿ ವಿರುದ್ಧ ದನಿಯೆತ್ತಿ ಎಲ್ಲರೂ ಸಮಾನರು ಎನ್ನುವ ಭಾವನೆಗಳನ್ನು ಇಟ್ಟುಕೊಂಡು ಹೋರಾಟ ಮಾಡಿದರು. ಇಂತಹ ದಾರ್ಶನಿಕರ ಜಯಂತಿಗಳಿಂದ ಆಯಾ ಸಮುದಾಯಗಳು ಸಂಘಟಿತರಾಗಬೇಕಿದ್ದು, ಈ ನಿಟ್ಟಿನಲ್ಲಿ ಯುವಜನತೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಈ. ವಿಶ್ವಾಸ್ ಮಾತನಾಡಿ, ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ಸಾಮಾಜಿಕ ಅಸಮತೋಲನವನ್ನು ಹೋಗಲಾಡಿಸಿ ಸಮಾನತೆ ಮೂಡಿಸಿದ ಮಹಾನ್ ದಾರ್ಶನಿಕರು. ಹಾಗೇ ಸಮಾಜದ ಶ್ರೇಷ್ಠ ಸಂತರಲ್ಲಿ ಅವರು ಸಹ ಒಬ್ಬರು. ತಮ್ಮ ಕೆಲಸದಲ್ಲಿ ಕಾಯಕ ಮತ್ತು ರಾಜನಿಷ್ಠೆ ಹೊಂದಿದ್ದ ಮಹಾನ್ ಪಂಡಿತರಾಗಿದ್ದರು ಅವರು ಹಾಕಿಕೊಟ್ಟಿರುವ ತತ್ವ ಸಿದ್ಧಾಂತಗಳಡಿ ಪ್ರತಿಯೊಬ್ಬ ಮನುಷ್ಯನು ಸಾಗಿದರೆ ಜನ್ಮ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರದಲ್ಲಿ ಕೆ.ಆರ್. ಬಸವರಾಜು ಮತ್ತು ತಂಡದಿಂದ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಎಂ.ಎಸ್.ಸುರೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಮತ್ತು ಸಿಬ್ಬಂದಿಗಳು ಹಾಗೂ ಮಡಿವಾಳ ಸಮಾಜದ ಹಿರಿಯರು ಬಾಂಧವರು ಪಾಲ್ಗೊಂಡಿದರು.